ಪೆಶಾವರ: ಬಾಲಿವುಡ್‌ನ ಪ್ರಸಿದ್ಧ ನಟ, ನಿರ್ದೇಶಕ, ದಿವಂಗತ ರಾಜಕಪೂರ್ ಅವರ ಜನ್ಮಸ್ಥಳವಾದ ಪಾಕಿಸ್ತಾನದ ಪೆಶಾವರದಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು.
ರಾಜಕಪೂರ್ ಅವರ 100ನೇ ಜನ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಲು ಹಾಗೂ ಅವರ ಕೊಡುಗೆಯ ಸ್ಮರಣಾರ್ಥವಾಗಿ ಖೈಬರ್ ಪಖ್ತೂಂಕ್ವಾ ಪ್ರಾಂತ್ಯದ ಸಾಂಸ್ಕೃತಿಕ ಪರಂಪರೆ ಮಂಡಳಿ (ಸಿಎಚ್‌ಸಿ) ಹಾಗೂ ಪುರಾತತ್ವ ನಿರ್ದೇಶನಾಲಯಗಳು ಜಂಟಿಯಾಗಿ ಶನಿವಾರ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಪೆಶಾವರದಲ್ಲಿರುವ ಕಪೂರ್ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಸಿನಿ ಪ್ರಿಯರು ಹಾಗೂ ಅಭಿಮಾನಿಗಳು ಭಾಗಿಯಾಗಿದ್ದರು.
ಪಾಕಿಸ್ತಾನದ ಖಿಸ್ಸಾ ಖವಾನಿ ಬಜಾರ್‌ನಲ್ಲಿರುವ ರಾಜ್ ಕಪೂರ್ ಹಾಗೂ ಮತ್ತೊಬ್ಬ ಖ್ಯಾತ ನಟ ದಿಲೀಪ್ ಕುಮಾರ್ ಅವರ ಪೂರ್ವಜರ ಮನೆಗಳ ನವೀಕರಣಕ್ಕಾಗಿ ವಿಶ್ವ ಬ್ಯಾಂಕ್ ತಲಾ ₹10 ಕೋಟಿ ನೀಡುವುದಾಗಿ ಘೋಷಿಸಿರುವ ನಿರ್ಧಾರವನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು.
ಪೆಶಾವರದ ಢಾಕಿ ನಲ್ಬಂಡಿಯಲ್ಲಿ 1924ರ ಡಿಸೆಂಬರ್ 14ರಂದು ರಾಜ್ ಕಪೂರ್ ಜನಿಸಿದರು. ಇವರ ತಂದೆ ಪೃಥ್ವಿರಾಜ್ ಕಪೂರ್ ಅವರೂ ಖ್ಯಾತ ನಟರಾಗಿದ್ದರು.