ಲಖನೌ: ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಮಸೀದಿ ಜಾಗದ ಮಾಲೀಕತ್ವದ ಕುರಿತು ಉತ್ತರ ಪ್ರದೇಶದಲ್ಲಿ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.
ಸಂಭಲ್, ಬದೌನ್ ಮಸೀದಿ ಜಾಗದ ಮಾಲೀಕತ್ವ ವಿಚಾರ ಮುಂದುವರಿದಿರುವಂತೆಯೇ, ಜೌನ್‌ಪುರ ಪಟ್ಟಣದ ಅಟಾಲಾ ಮಸೀದಿ ಜಾಗದ ವಿಚಾರವೂ ಈಗ ಹೈಕೋರ್ಟ್ ಮೆಟ್ಟಿಲೇರಿದೆ.
'ಅಟಾಲಾ ಮಸೀದಿ ಮೂಲತಃ ಅಟಾಲಾ ದೇವಿ ಮಂದಿರವಾಗಿತ್ತು. 13ನೇ ಶತಮಾನದಲ್ಲಿ ಹಿಂದೂ ರಾಜ ವಿಜಯಚಂದ್ರ ನಿರ್ಮಿಸಿದ್ದರು. ನಂತರ ಫಿರೋಜ್ ಶಾ ತುಘಲಕ್ (1351-1388) ಅವಧಿಯಲ್ಲಿ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿತ್ತು. ವಿವಾದಿತ ಆಸ್ತಿಯು ದೇವಿಯ ಭಕ್ತರಿಗೆ ಸೇರಿದ್ದು, ಅಲ್ಲಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು' ಎಂದು ಹಿಂದೂ ಸಂಘಟನೆ 'ಸ್ವರಾಜ್ ವಾಹಿನಿ'ಯು ಜೌನ್‌ಪುರ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಈ ಅರ್ಜಿ ಪರಿಗಣಿಸಿದ್ದ ನ್ಯಾಯಾಲಯವು ಮೇ 29ರಂದು ವಿಚಾರಣೆ ನಡೆಸಲು ಒಪ್ಪಿತ್ತು. ಈ ಕುರಿತು ಮುಸಲ್ಮಾನರ ಪರವಾಗಿ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಕಳೆದ ಆಗಸ್ಟ್ ತಿಂಗಳಲ್ಲಿ ನ್ಯಾಯಾಲಯವು ತಿರಸ್ಕರಿಸಿತ್ತು.
ಜಿಲ್ಲಾ ನ್ಯಾಯಾಲಯದ ನಿರ್ಧಾರವನ್ನು ಮಸೀದಿಯ ಆಡಳಿತ ಮಂಡಳಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಕುರಿತು ಮೂರು ವಾರಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಹಿಂದೂ ಸಂಘಟನೆಗಳಿಗೆ ಸೂಚಿಸಿದೆ.