ನವದೆಹಲಿ: 'ಭಾರತದ ಆರ್ಥಿಕತೆಯನ್ನು ಮುನ್ನಡೆಸಲು ಹೊಸ ಚಿಂತನೆಯ ಅಗತ್ಯವಿದ್ದು, ಉದ್ಯಮಕ್ಕೆ ಸಂಬಂಧಿಸಿದ ನೂತನ ನೀತಿಯು ಅದರ ಪ್ರಮುಖ ಭಾಗವಾಗಿರಬೇಕು' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಿ, ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಅವಧಿಯಲ್ಲಿ ದೇಶೀಯ ಆಂತರಿಕ ಉತ್ಪನ್ನ (ಜಿಡಿಪಿ) ಶೇ 5.4ರಷ್ಟು ದಾಖಲಾಗಿದೆ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ತಿಳಿಸಿದೆ.
'ಬೆರಳೆಣಿಕೆಯಷ್ಟು ಶತಕೋಟ್ಯಧಿಪತಿಗಳಿಗೆ ಮಾತ್ರ ಪ್ರಯೋಜನ ನೀಡುವ ಆರ್ಥಿಕ ನೀತಿಯನ್ನು ಹೊಂದಿದರೆ, ಭಾರತದ ಆರ್ಥಿಕತೆಯ ಪ್ರಗತಿ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಮತ್ತು ಬಡವರು ವಿವಿಧ ರೀತಿಯ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ' ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶದ ಆರ್ಥಿಕತೆಯಲ್ಲಿ ತಯಾರಿಕಾ ವಲಯದ ಪಾಲು ಶೇ 13ಕ್ಕೆ ಕುಸಿದಿದ್ದು, ಕಳೆದ 50 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಜಾರಿ ಇದಕ್ಕೆ ಕಾರಣ ಎಂದು ದೂರಿದ್ದಾರೆ.
'ಇಂತಹ ಪರಿಸ್ಥಿತಿಯಲ್ಲಿ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹೇಗೆ? ಅದಕ್ಕಾಗಿಯೇ ಭಾರತದ ಆರ್ಥಿಕತೆಗೆ ಹೊಸ ಚಿಂತನೆಯ ಅಗತ್ಯವಿದೆ. ಎಲ್ಲರಿಗೂ ಪ್ರಗತಿ ಸಾಧಿಸಲು ಸಮಾನ ಅವಕಾಶ ಲಭಿಸಿದರಷ್ಟೇ, ನಮ್ಮ ಆರ್ಥಿಕತೆಯ ಚಕ್ರ ಮುನ್ನಡೆಯುತ್ತದೆ' ಎಂದರು.
ಚಿಲ್ಲರೆ ಹಣದುಬ್ಬರ 14 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಅಂದರೆ ಶೇ 6.21ಕ್ಕೆ ಏರಿಕೆಯಾಗಿರುವುದು ಆತಂಕದ ವಿಚಾರ. ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಆಲೂಗೆಡ್ಡೆ ಮತ್ತು ಈರುಳ್ಳಿ ದರ ಶೇ 50ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
'ನಿರುದ್ಯೋಗ ಪ್ರಮಾಣ ಈಗಾಗಲೇ 45 ವರ್ಷಗಳ ದಾಖಲೆಯನ್ನು ಮುರಿದಿದೆ. ಕಳೆದ 5 ವರ್ಷಗಳಲ್ಲಿ ಕಾರ್ಮಿಕರು, ಉದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಆದಾಯವು ಕುಸಿದಿದೆ ಅಥವಾ ಗಮನಾರ್ಹವಾಗಿ ಕಡಿಮೆಯಾಗಿದೆ. ಆದಾಯ ಕಡಿಮೆಯಾದ ಕಾರಣ ಬೇಡಿಕೆಯೂ ಕುಸಿದಿದೆ' ಎಂದಿದ್ದಾರೆ.