ಕಾಸರಗೋಡು: ಕೇರಳ ಗ್ರಾಮೀಣ ಬ್ಯಾಂಕ್ ಸಿಎಸ್‍ಆರ್ ನಿಧಿಯಿಂದ ಐದು ಲಕ್ಷ ರೂ.ಗಳನ್ನು ಐ-ಲೀಡಿಗೆ (ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ವಿಕಲಚೇತನರಿಗೆ ಸಮಗ್ರ ಜೀವನೋಪಾಯ ಕಾರ್ಯಕ್ರಮ) ನೀಡಿದೆ. ಇದು ವಿಕಲಚೇತನರಿಗೆ ಮತ್ತು ಅವರ ಜೀವನೋಪಾಯಕ್ಕಾಗಿ ಜಿಲ್ಲಾಡಳಿತದ ವಿನೂತನ ಯೋಜನೆಯಾಗಿದೆ. ಎಂಡೋಸಲ್ಫಾನ್ ಪೀಡಿತ ಪ್ರದೇಶದಲ್ಲಿ ಪೋಷಕರು ಈ ನೆರತವು ಪಡೆಯಲಿದ್ದಾರೆ. ಐ ಲೀಡ್ ಯೋಜನೆಯ ಭಾಗವಾಗಿ ಮುಳಿಯಾರಿನ ತಣಲ್ ಎಂಸಿಆರ್‍ಸಿಯಲ್ಲಿ ಕಾರ್ಯಾರಂಭ ಮಾಡಿದ ನೋಟ್ ಬುಕ್ ತಯಾರಿಕಾ ಘಟಕದ ಚಟುವಟಿಕೆಗಳಿಗೆ ಕೇರಳ ಗ್ರಾಮೀಣ ಬ್ಯಾಂಕ್ ಹಣ ಒದಗಿಸಿದೆ. ಕೇರಳ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಶ್ರೀಲತಾ ವರ್ಮಾ, ಹಿರಿಯ ವ್ಯವಸ್ಥಾಪಕ ಆರ್. ಪ್ರಮೋದ್ ಹಾಗೂ ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಅವರಿಗೆ ಐದು ಲಕ್ಷದ ಚೆಕ್ ಹಸ್ತಾಂತರಿಸಲಾಯಿತು. ಐ ಲೀಡ್ ನೋಡಲ್ ಅಧಿಕಾರಿಗಳಾದ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್, ಎಂಡೋಸಲ್ಫಾನ್ ಸೆಲ್ ಡೆಪ್ಯೂಟಿ ಕಲೆಕ್ಟರ್ ಪಿ.ಸುರ್ಜಿತ್, ಮುಳಿಯಾರ್ ಪ್ಯಾರಾಡಿಗ್ಮಾ ಪುನರ್ವಸತಿ ಕೇಂದ್ರದ ಪ್ರಭಾರ ಪ್ರಾಂಶುಪಾಲೆ ಸುಮಾ, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಮತ್ತಿತರರು ಭಾಗವಹಿಸಿದ್ದರು.
ಐ ಲೀಡ್ ಯೋಜನೆಯ ಭಾಗವಾಗಿ ಪೆರಿಯ ಎಂಸಿಆರ್‍ಸಿಯಲ್ಲಿ ಕೈಮಗ್ಗ ಉತ್ಪನ್ನ ತಯಾರಿಕಾ ಘಟಕ ಮತ್ತು ಮುಳಿಯಾರ್‍ನಲ್ಲಿ ನೋಟ್‍ಬುಕ್ ತಯಾರಿಕಾ ಘಟಕ ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ವಿನೂತನ ಯೋಜನೆಯಾದ ಐ-ಲೀಡ್ ಸೇರಿದಂತೆ ವಿಕಲಚೇತನರ ಕ್ಷೇತ್ರದಲ್ಲಿನ ವಿವಿಧ ಚಟುವಟಿಕೆಗಳಿಗಾಗಿ ಸಾಮಾಜಿಕ ನ್ಯಾಯ ಇಲಾಖೆಯ ಈ ವರ್ಷದ ಅತ್ಯುತ್ತಮ ಜಿಲ್ಲೆ ಎಂಬ ಪ್ರಶಸ್ತಿ ಕಾಸರಗೋಡಿಗೆ ಲಭಿಸಿದೆ. ವಿಕಲಚೇತನ ಮಕ್ಕಳು ಮತ್ತು ಅವರ ಪೋಷಕರು ತಯಾರಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಜಿಲ್ಲಾ ಮಟ್ಟದಲ್ಲಿ ಸಹಕಾರ ಸಂಘ ಆರಂಭಿಸುವ ಕೆಲಸ ನಡೆಯುತ್ತಿದೆ. ದೇಶದ ಒಳಗೆ ಮತ್ತು ಹೊರಗೆ ಐ-ಲೀಡ್ ಬ್ರಾಂಡ್ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸುವುದು ಲಕ್ಷ್ಯವಾಗಿದೆ.