ಕಾಬೂಲ್: ಅಫ್ಗಾನಿಸ್ತಾನದ ಮಹಿಳೆಯರಿಗೆ ಉದ್ಯೋಗ ನೀಡುವ ಎಲ್ಲ ರಾಷ್ಟ್ರೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆಗಳನ್ನು (ಎನ್‌ಜಿಒ) ಮುಚ್ಚುವುದಾಗಿ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.
ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಎನ್‌ಜಿಒಗಳು ತಮ್ಮ ಪರವಾನಗಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆರ್ಥಿಕ ಸಚಿವಾಲಯವು ಭಾನುವಾರ ರಾತ್ರಿ 'ಎಕ್ಸ್' ಮೂಲಕ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಮತ್ತು ವಿದೇಶಿ ಎನ್‌ಜಿಒಗಳ ನೋಂದಣಿ ಮತ್ತು ಮೇಲ್ವಿಚಾರಣೆಯನ್ನು ನಡೆಸುವ ಜವಾಬ್ದಾರಿ ಸಚಿವಾಲಯದ್ದಾಗಿದೆ ಎಂದು ಅದು ತಿಳಿಸಿದೆ.
ತನ್ನ ನಿಯಂತ್ರಣದಲ್ಲಿ ಇಲ್ಲದ ಎಲ್ಲ ಸಂಸ್ಥೆಗಳಲ್ಲಿಯೂ ಮಹಿಳೆಯರು ಕಾರ್ಯನಿರ್ವಹಿಸುವುದನ್ನು ತಡೆಯಲು ತಾಲಿಬಾನ್ ಸರ್ಕಾರ ಮುಂದಾಗಿದೆ.
ಹಿಜಾಬ್ ಸರಿಯಾಗಿ ಧರಿಸದ ಕಾರಣ ಮಹಿಳೆಯರನ್ನು ಕೆಲಸದಿಂದ ವಜಾಗೊಳಿಸುವಂತೆ ತಾಲಿಬಾನ್ ಸರ್ಕಾರ ಎಲ್ಲ ಎನ್‌ಜಿಒಗಳಿಗೆ ಎರಡು ವರ್ಷಗಳ ಹಿಂದೆ ಸೂಚನೆ ನೀಡಿತ್ತು.
ಈ ಹೊಸ ಸೂಚನೆ ಮೂಲಕ ಎನ್‌ಜಿಒಗಳನ್ನು ನಿಯಂತ್ರಿಸಲು ತಾಲಿಬಾನ್ ಆಡಳಿತ ಮುಂದಾಗಿದೆ.
ಕಟ್ಟಡಗಳಿಗೆ ಕಿಟಕಿ ಬೇಡ:
ಕಟ್ಟಡಗಳಿಗೆ ಕಿಟಕಿಗಳನ್ನು ಅಳವಡಿಸಬಾರದು ಎಂದು ತಾಲಿಬಾನ್ ನಾಯಕ ಹಿಬತ್‌ಉಲ್ಲಾ ಅಖುಂಡ್ಜಾದ ಆದೇಶ ಹೊರಡಿಸಿದ್ದಾರೆ. ಈ ಆದೇಶವು ಹೊಸ ಮತ್ತು ಈಗಿರುವ ಕಟ್ಟಡಗಳಿಗೂ ಅನ್ವಯವಾಗಲಿದೆ.
ಮುನ್ಸಿಪಾಲಿಟಿಗಳ ಅಧಿಕಾರಿಗಳು ಈ ಕಟ್ಟಡಗಳನ್ನು ಪರಿಶೀಲಿಸಲಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯರು ಅಡುಗೆಮನೆಯಿಂದ ಕಿಟಕಿಯ ಮೂಲಕ ಹೊರಗೆ ನೋಡುವುದು, ಅಂಗಳದಲ್ಲಿರುವುದನ್ನು ಮತ್ತು ಬಾವಿಯಿಂದ ನೀರು ಸೇದುವುದನ್ನು ನೋಡುವುದು ಅಪರಾಧಗಳಿಗೆ ಕಾರಣವಾಗಬಹುದು ಎಂದು ಸರ್ಕಾರದ ವಕ್ತಾರರೊಬ್ಬರು 'ಎಕ್ಸ್' ಮೂಲಕ ತಿಳಿಸಿದ್ದಾರೆ.