ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ. ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿಯವರು ಶಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಸಂವಿಧಾನ ಶಿಲ್ಪಿಯನ್ನು ಸದಾ ಅವಮಾನಿಸುತ್ತಲೇ ಇರುವ ಕಾಂಗ್ರೆಸ್ ಪಕ್ಷದ ಕರಾಳ ಇತಿಹಾಸವನ್ನು ಗೃಹ ಸಚಿವರು ಬಹಿರಂಗಪಡಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಅಮಿತ್ ಶಾ ಹೇಳಿದ ಸತ್ಯಗಳಿಂದ ಕಾಂಗ್ರೆಸ್‌ನವರು ಸ್ಪಷ್ಟವಾಗಿ ದಿಗ್ಭ್ರಮೆಗೊಂಡಿದ್ದಾರೆ. ಅದಕ್ಕಾಗಿಯೇ ಅವರು ಈಗ ಡ್ರಾಮಾ ಮಾಡುತ್ತಿದ್ದಾರೆ. ಜನರಿಗೆ ಸತ್ಯ ತಿಳಿದಿದೆ ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಮೋದಿ, ಪಕ್ಷ ಮತ್ತು ಅದರ ಕೊಳೆತು ನಾರುವ ಪರಿಸರ ವ್ಯವಸ್ಥೆಯು ತಮ್ಮ ದುರುದ್ದೇಶಪೂರಿತ ಸುಳ್ಳುಗಳು ತಮ್ಮ ಹಲವಾರು ವರ್ಷಗಳ ದುಷ್ಕೃತ್ಯಗಳನ್ನು ಮರೆಮಾಚಬಹುದು ಎಂದುಕೊಂಡಿದ್ದರೆ ಅದು ತಪ್ಪು. ಅದರಲ್ಲೂ ಅಂಬೇಡ್ಕರ್ ಅವರಿಗೆ ಅವರು ಮಾಡಿದ ಅವಮಾನಗಳನ್ನು ಅವರು ಮರೆಮಾಚಲು ಸಾಧ್ಯವಿಲ್ಲ ಎಂದಿದ್ದಾರೆ.
ನೆಹರು-ಗಾಂಧಿ ಕುಟುಂಬವನ್ನು ಉಲ್ಲೇಖಿಸಿ, ಒಂದು ರಾಜವಂಶದ ನೇತೃತ್ವದ ಪಕ್ಷವು ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಮತ್ತು ಎಸ್‌ಸಿ,ಎಸ್‌ಟಿ ಸಮುದಾಯಗಳನ್ನು ಅವಮಾನಿಸಲು ಸಾಧ್ಯವಿರುವ ಎಲ್ಲ ಕೊಳಕು ತಂತ್ರಗಳಲ್ಲಿ ಹೇಗೆ ತೊಡಗಿದೆ ಎಂಬುದನ್ನು ಭಾರತದ ಜನರು ಪದೇ ಪದೇ ನೋಡಿದ್ದಾರೆ ಎಂದು ಮೋದಿ ಟೀಕಿಸಿದ್ದಾರೆ.
ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದು ಸೇರಿದಂತೆ ಕಾಂಗ್ರೆಸ್ ಮಾಡಿದ ಪಾಪಗಳ ಪಟ್ಟಿ ದೊಡ್ಡದಿದೆ ಎಂದಿದ್ದಾರೆ. ದೇಶದ ಮೊದಲ ಪ್ರಧಾನಿ ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿ ಅವರನ್ನು ಸೋಲಿಸಿದರು. ಅವರಿಗೆ ಭಾರತರತ್ನ ನಿರಾಕರಿಸಲಾಯಿತು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಅವರ ಭಾವಚಿತ್ರ ಹಾಕಲು ಬಿಡಲಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.