ನವದೆಹಲಿ: ಭಾರತದ ಸಂವಿಧಾನವನ್ನು ಅಳವಡಿಸಿಕೊಂಡ 75ನೇ ವರ್ಷಾಚರಣೆ ಅಂಗವಾಗಿ ಸಂವಿಧಾನದ ಕುರಿತ ಮಾತು ಮಂಥನ ಲೋಕಸಭೆಯಲ್ಲಿ ಶುಕ್ರವಾರ ಆರಂಭವಾಯಿತು. ಈ ವೇಳೆ, ಎನ್‌ಡಿಎ ಮೈತ್ರಿಕೂಟ ಹಾಗೂ 'ಇಂಡಿಯಾ' ಮೈತ್ರಿಕೂಟದ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿದರು.
ತುರ್ತು ಪರಿಸ್ಥಿತಿ ಹೇರಿಕೆ, ವಿದ್ಯುನ್ಮಾನ ಮತ ಯಂತ್ರಗಳ ಕುರಿತ ವಿವಾದ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, 356ನೇ ವಿಧಿ, ಆಪರೇಷನ್ ಕಮಲ ಮತ್ತಿತರ ವಿಷಯಗಳ ಕಡೆಗೆ ಸದಸ್ಯರ ಮಾತು ಹೊರಳಿತು.
ಚರ್ಚೆಗೆ ಚಾಲನೆ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, 'ಸಂಸ್ಥೆಗಳ ಸ್ವಾಯತ್ತತೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ' ಎಂದು ಟೀಕಾಪ್ರಹಾರ ನಡೆಸಿದರು. 'ಸಂವಿಧಾನವು 'ಸಂಘ್ ಕಾ ವಿಧಾನ್' (ಆರ್‌ಎಸ್‌ಎಸ್ ನಿಯಮ ಪುಸ್ತಕ) ಅಲ್ಲ ಎಂಬುದು ಮೋದಿಗೆ ಅರ್ಥವಾಗುತ್ತಿಲ್ಲ' ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದರು. ಆಡಳಿತ ಹಾಗೂ ವಿಪಕ್ಷಗಳ ಹಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದರು. ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿದ್ದನ್ನು ಪ್ರಸ್ತಾಪಿಸಿ ಎನ್‌ಡಿಎ ಮೈತ್ರಿಕೂಟದ ಸದಸ್ಯರು ಟೀಕಿಸಿದರು. ಸಂವಿಧಾನ ಬದಲಾವಣೆ ಕುರಿತ ಬಿಜೆಪಿ ನಾಯಕರ ಹೇಳಿಕೆ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯಂತಹ ವಿಷಯಗಳನ್ನು ಪ್ರಸ್ತಾಪಿಸಿ ವಿಪಕ್ಷ ಸದಸ್ಯರು ವಾಗ್ಬಾಣ ಬಿಟ್ಟರು. ಈ ಚರ್ಚೆಯು ಮೋದಿ ಅವರ ಉತ್ತರದೊಂದಿಗೆ ಕೆಳಮನೆಯಲ್ಲಿ ಶನಿವಾರ ಮುಕ್ತಾಯಗೊಳ್ಳಲಿದೆ.
ನ್ಯಾಯಮೂರ್ತಿ ಲೋಯಾ ಅವರ ಸಾವಿನ ಬಗ್ಗೆ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ನೀಡಿದ ಹೇಳಿಕೆಯು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಕಲಾಪ ಎರಡು ಬಾರಿ ಮುಂದೂಡಿಕೆಯಾಯಿತು.
ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗಿರುವ ವಿಷಯವನ್ನು ಮಹುವಾ ಪ್ರಸ್ತಾಪಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿದರು. ಈ ಹೇಳಿಕೆಗೆ ಸೂಕ್ತ ಸಂಸದೀಯ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು. ಸಚಿವರು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಧ್ಯಪ್ರವೇಶಿಸಿ ಈ ವಿಷಯವನ್ನು ಪರಿಶೀಲಿಸುವಾಗಿ ಹೇಳಿದ ನಂತರ ಚರ್ಚೆ ಮತ್ತೆ ಆರಂಭವಾಯಿತು.