ನವದೆಹಲಿ: ವಿವಿಧ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸುವ ಭರವಸೆಯನ್ನು ಈಡೇರಿಸದ ಸರ್ಕಾರದ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಇತರ ಸದಸ್ಯರು ಬುಧವಾರ ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿದರು.
ಚಂಡಮಾರುತ 'ಫೆಂಜಲ್' ಪರಿಣಾಮಗಳಿಂದ ತತ್ತರಿಸಿರುವ ರೈತರ ಸಮಸ್ಯೆಗಳು, ಅದಾನಿ ಪ್ರಕರಣ, ಸಂಭಲ್ ಹಿಂಸಾಚಾರ ವಿಷಯಗಳ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್‌ನ ಐವರು ಸದಸ್ಯರು ನೋಟಿಸ್ ಸಲ್ಲಿಸಿದ್ದರು.
ಆದರೆ, ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಇದಕ್ಕೆ ಸಮ್ಮತಿಸಲಿಲ್ಲ.
ಚರ್ಚೆಗೆ ಅವಕಾಶ ನೀಡುವಂತೆ ಕೋರಿದ್ದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೆ ಎಎಪಿ, ಎನ್‌ಸಿಪಿ (ಶರದ್ ಬಣ), ಶಿವಸೇನೆ (ಉದ್ಧವ್ ಬಣ) ಸದಸ್ಯರು ಬೆಂಬಲಿಸಿದರು. ಕೃಷಿಕರ ಸಮಸ್ಯೆಗಳ ಚರ್ಚೆಗೆ ತಕ್ಷಣ ಅವಕಾಶವನ್ನು ಕಲ್ಪಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಉತ್ತರಪ್ರದೇಶ ಮತ್ತು ವಿವಿಧ ರಾಜ್ಯಗಳ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ-ನೊಯಿಡಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಇದನ್ನು ಮುಂಬೈನಲ್ಲಿ ಪ್ರಸ್ತಾಪಿಸಿದ್ದ ಧನಕರ್, 'ಪ್ರತಿಭಟನನಿರತ ರೈತರ ಜೊತೆ ಏಕೆ ಚರ್ಚಿಸುತ್ತಿಲ್ಲ' ಎಂದು ಪ್ರಶ್ನಿಸಿದ್ದರು.
ಬುಧವಾರ ರೈತರ ವಿಷಯ ಪ್ರಸ್ತಾಪಿಸಿ ಪ್ರತಿಭಟನೆಗಿಳಿದಿದ್ದ ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗತೊಡಗಿದರು. ಆದರೆ, ಚರ್ಚೆಗೆ ಅವಕಾಶ ನಿರಾಕರಿಸಿದ ಧನಕರ್, ತಾವು ನಿಗದಿಯಂತೆ ಶೂನ್ಯವೇಳೆಯ ಕಲಾಪವನ್ನು ಕೈಗೆತ್ತಿಗೊಳ್ಳುವುದಾಗಿ ಘೋಷಿಸಿದರು.
'ಘೋಷಣೆ ಕೂಗುವುದರಿಂದ ಹಾಗೂ ಮೊಸಳೆ ಕಣ್ಣೀರು ಸುರಿಸುವುದರಿಂದ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ' ಎಂದು ಧನಕರ್ ಇದೇ ವೇಳೆ ವಿರೋಧ ಪಕ್ಷದವರಿಗೆ ಹೇಳಿದರು.
ನಂತರ ಕಾಂಗ್ರೆಸ್‌ನ ಉಪ ನಾಯಕ ಪ್ರಮೋದ್ ತಿವಾರಿ ಅವರಿಗೆ ಕೃಷಿಕರ ಸಮಸ್ಯೆಗಳ ಕುರಿತು ಮಾತನಾಡಲು ಅವಕಾಶ ಕಲ್ಪಿಸಿದರು.
ವಿಷಯ ಪ್ರಸ್ತಾಪಿಸಿದ ತಿವಾರಿ, 'ಎಂಎಸ್‌ಪಿಗೆ ಕಾಯ್ದೆಯ ಬೆಂಬಲ ನೀಡಬೇಕು. ಸರ್ಕಾರ ಎಂಎಸ್‌ಪಿ ಹೆಚ್ಚಿಸುವ ಭರವಸೆ ಈಡೇರಿಸುತ್ತಿಲ್ಲ. ನಮ್ಮ ಬೇಡಿಕೆಗೆ ಈಗ ಸಾಂವಿಧಾನಿಕ ಸ್ಥಾನದಲ್ಲಿ ಇರುವವರು ದನಿಗೂಡಿಸಿದ್ದೀರಿ. ಭರವಸೆ ಈಡೇರಿಸಲು ಸರ್ಕಾರಕ್ಕೆ ನಿರ್ದೇಶಿಸಿ' ಎಂದು ಕೋರಿದರು.
ಇತರ ಕೆಲ ಸದಸ್ಯರು ಕೃಷಿಕರ ಸಮಸ್ಯೆಗಳ ಕುರಿತು ಮಾತನಾಡಲು ಬಯಸಿದರು. ಸಭಾಪತಿ ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ಇದನ್ನು ಖಂಡಿಸಿ ಕಾಂಗ್ರೆಸ್, ಶಿವಸೇನೆ, ಎನ್‌ಸಿಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಮುಂಬೈನಲ್ಲಿ ಮಂಗಳವಾರ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಧನಕರ್ ಅವರು, 'ಪ್ರತಿಭಟನನಿರತ ಕೃಷಿಕರ ಜೊತೆಗೆ ಯಾಕೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಕೃಷಿ ಸಚಿವರು ಈ ಬಗ್ಗೆ ಉತ್ತರಿಸಬೇಕು. ರೈತರಿಗೆ ನೀಡಲಾಗಿದ್ದ ಭರವಸೆಗಳನ್ನು ಏಕೆ ಈಡೇರಿಸಿಲ್ಲ' ಎಂದು ಪ್ರಶ್ನಿಸಿದ್ದರು.
ಸ್ಪಷ್ಟನೆ ಕೇಳಲೂ ಅವಕಾಶ ನಿರಾಕರಣೆ: ಪ್ರತಿಪಕ್ಷ ಕಿಡಿ
ವಿದೇಶಾಂಗ ಸಚಿವರ ಹೇಳಿಕೆ ಬಳಿಕ ಭಾರತ- ಚೀನಾ ಬಾಂಧವ್ಯ ಕುರಿತು ಸ್ಪಷ್ಟನೆ ಕೇಳಲು ಅವಕಾಶ ನೀಡದ ರಾಜ್ಯಸಭೆಯ ಸಭಾಪತಿ ನಡೆ ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಬುಧವಾರ ಸಭಾತ್ಯಾಗ ಮಾಡಿದರು.
'ಭಾರತ-ಚೀನಾ ಬಾಂಧವ್ಯ ಕುರಿತ ಈಚಿನ ಬೆಳವಣಿಗೆ' ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿಕೆ ನೀಡಿದರು. ಮಂಗಳವಾರ ಕೆಳಮನೆಯಲ್ಲೂ ಹೇಳಿಕೆ ನೀಡಿದ್ದರು. ನಿಯಮ ಉಲ್ಲೇಖಿಸಿದ ಧನಕರ್ ಸ್ಪಷ್ಟನೆ ಕೇಳಲು ವಿಪಕ್ಷದವರಿಗೆ ಅವಕಾಶ ನೀಡಲಿಲ್ಲ. ಮತ್ತೊಂದು ಮಸೂದೆ ಕುರಿತು ಚರ್ಚೆಗೆ ಅವಕಾಶ ನೀಡಿದರು. ಇದನ್ನು ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಸಂಸದರ ನಡೆಯನ್ನು ಇಡೀ ದೇಶ ಗಮನಿಸುತ್ತಿದೆ. ಅವರ ವರ್ತನೆಯು ಸಂಸತ್ತಿನ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಧನಕರ್ ಕಿಡಿಕಾರಿದರು.
ಹೇಳಿಕೆ ನೀಡಿದ್ದ ಜೈಶಂಕರ್ ಅವರು 'ಭಾರತ ಚೀನಾ ಬಾಂಧವ್ಯ ಹಲವು ಆಯಾಮದಿಂದ ಸುಧಾರಿಸುತ್ತಿದೆ. ಬರುವ ದಿನಗಳಲ್ಲಿ ಸೇನೆ ವಾಪಸಾತಿ ಗಡಿಯಲ್ಲಿ ನಮ್ಮ ಚಟುವಟಿಕಗಳ ಪರಿಣಾಮಕಾರಿ ಮೇಲ್ವಿಚಾರಣೆ ಕುರಿತಂತೆಯೂ ಪರಸ್ಪರ ಚರ್ಚಿಸಲಿದ್ದೇವೆ' ಎಂದರು.
ಜೈರಾಮ್ ರಮೇಶ್, ಕಾಂಗ್ರೆಸ್ ಸದಸ್ಯ ರಾಜ್ಯಸಭೆಕೃಷಿಕರ ಸಮಸ್ಯೆ ಬಗ್ಗೆ ನಾವು ಎತ್ತಿರುವ ಪ್ರಶ್ನೆಗಳನ್ನೇ ಧನಕರ್ ಕೇಳಿದ್ದಾರೆ. ರಾಜ್ಯಸಭೆಯ ಪೋಷಕರಾದ ಅವರು ಸಂವಿಧಾನ ರಕ್ಷಿಸಬೇಕು. ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಜಗದೀಪ್ ಧನಕರ್, ರಾಜ್ಯಸಭೆ ಸಭಾಪತಿನೀವುಗಳು (ವಿರೋಧಪಕ್ಷಗಳು) ರಾಜಕಾರಣ ಮಾಡುತ್ತಿದ್ದೀರಿ. ಕೃಷಿಕರ ಸಮಸ್ಯೆಗಳಿಗೆ ನಿಮಗೆ ಪರಿಹಾರ ಬೇಕಿಲ್ಲ. ಕೃಷಿಕರು ಎಂದಿಗೂ ನಿಮಗೆ ಕೊನೆಯ ಆದ್ಯತೆ.