ಶಬರಿಮಲೆ: ಶಬರಿಮಲೆ ಶ್ರೀಅಯ್ಯಪ್ಪ ಸ್ವಾಮಿ ಸನ್ನಿಧಿಯ ಗರ್ಭಗೃಹದ ಬಾಗಿಲು ಸೋಮವಾರ (ಡಿಸೆಂಬರ್ 30) ಸಂಜೆ 4 ಗಂಟೆಗೆ ಮಕರ ಬೆಳಕು ಉತ್ಸವದ ಹಿನ್ನೆಲೆಯಲ್ಲಿ ತೆರೆಯಲಾಯಿತು.
ಸಂಜೆ ನಾಲ್ಕು ಗಂಟೆಗೆ ದೇವಳದ ತಂತ್ರಿ ಕಂಠಾರರ್ ರಾಜೀವರರ ಉಪಸ್ಥಿತಿಯಲ್ಲಿ, ಪ್ರಧಾನ ಮೇಲ್ಶಾಂತಿ ಎಸ್. ಅರುಣಕುಮಾರ ನಂಬೂದಿರಿ ಬಾಗಿಲು ತೆರೆದರು. ಬಳಿಕ ಶಬರೀಶನ ಮೂರ್ತಿಗೆ ಹಾಕಲಾಗಿದ್ದ ವಿಭೂತಿ ಹಾಗೂ ಬೀಗದ ಕೀಲಿಯನ್ನು ಮಾಳಿಗಪ್ಪುರಂ ಸನ್ನಿಧಿಯ ಮೇಲ್ಶಾಂತಿ ಟಿ. ವಾಸುದೇವನ್ ನಂಬೂದಿರಿ ಅವರು ಪಡೆದುಕೊಂಡು ಮಾಳಿಗಪ್ಪುರಂ ದೇಗುಲದಲ್ಲಿ ಗಣಪತಿ ಮತ್ತು ನಾಗರಾಜ ಸನ್ನಿಧಿಯ ಬಾಗಿಲುಗಳ ಬೀಗ ತೆರೆದರು.
ಅಯ್ಯಪ್ಪ ಭಕ್ತರು ಹದಿನೆಂಟನೇ ಮೆಟ್ಟಿಲು ಹತ್ತಿದ ನಂತರ ಮೇಲ್ಶಾಂತಿ ಅರುಣ್‍ಕುಮಾರ್ ನಂಬೂದಿರಿ ದೀಪ ಬೆಳಗಿಸಿ ದರ್ಶನ ಪಡೆದರು. ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ಬಿ. ಮುರಾರಿ ಬಾಬು, ಆಡಳಿತಾಧಿಕಾರಿ ಬಿಜು ವಿ. ನಾಥ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಕಳೆದ ಡಿಸೆಂಬರ್ 26 ರಂದು ಮಂಡಲಮಹೋತ್ಸವದ ಬಳಿಕ ಸನ್ನಿಧಿಯ ಗರ್ಭಗೃಹ ಮುಚ್ಚಲಾಗಿತ್ತು.
ಜನವರಿ 14 ರಂದು ಮಕರ ಬೆಳಕು ಮಹೋತ್ಸವ ದರ್ಶನ ನಡೆಯಲಿದೆ. ಜನವರಿ 19 ರವರೆಗೆ ಯಾತ್ರಾರ್ಥಿಗಳು ಭೇಟಿ ನೀಡಬಹುದಾಗಿದೆ. ಜನವರಿ 20ರಂದು ಬೆಳಗ್ಗೆ ಕಾಲ್ನಡೆ ದಾರಿ ಮುಚ್ಚಲಾಗುತ್ತದೆ.