ನವದೆಹಲಿ: 'ಅವರಿಗೆ ಒಳ್ಳೆಯದಾಗಲಿ. ಅವರು ಜನರ ಅಭಿವೃದ್ಧಿಗಿಂತ ಶಸ್ತ್ರಾಸ್ತ್ರಗಳಿಗೇ ಆದ್ಯತೆ ನೀಡಿದ್ದಾರೆ' ಎಂದು ಭಾರತೀಯ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಹೇಳಿದರು.
ಮುಂದಿನ ದಶಕದ ವೇಳೆಗೆ 50 ಯುದ್ಧನೌಕೆಗಳನ್ನು ಹೊಂದುವ ಪಾಕಿಸ್ತಾನದ ಮಹತ್ವಾಕಾಂಕ್ಷೆಯ ಬಗ್ಗೆ ಪ್ರಶ್ನಿಸಿದಾಗ ತ್ರಿಪಾಠಿ ಹೀಗೆ ಉತ್ತರಿಸಿದರು.
'ಪಾಕಿಸ್ತಾನ ನೌಕಾಪಡೆಯ ಆಶ್ಚರ್ಯಕರ ಬೆಳವಣಿಗೆ ಬಗ್ಗೆ ನಮಗೆ ಅರಿವಿದೆ. ಮುಂದಿನ ದಶಕದ ವೇಳೆಗೆ 50 ಯುದ್ಧನೌಕೆಗಳ ಪಡೆಯಾಗುವ ಗುರಿಯನ್ನು ಅವರು ಹೊಂದಿದ್ದಾರೆ. ಅವರ ಅರ್ಥ ವ್ಯವಸ್ಥೆಯನ್ನು ಗಮನಿಸಿದರೆ, ಅವರು ಇಷ್ಟೊಂದು ಯುದ್ಧನೌಕೆಗಳನ್ನು, ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿರುವುದು ಆಶ್ಚರ್ಯ ಮೂಡಿಸುತ್ತದೆ' ಎಂದು ತ್ರಿಪಾಠಿ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
'ಅವರು ಜನರ ಅಭಿವೃದ್ಧಿಗಿಂತಲೂ ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹೀಗಾಗಿ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುವೆ' ಎಂದರು.
ಹೆಚ್ಚುವರಿಯಾಗಿ 50 ನೌಕೆಗಳನ್ನು ಹೊಂದುವುದಾಗಿ ಪಾಕಿಸ್ತಾನದ ನೌಕಾಪಡೆಯು ಈಚೆಗೆ ಘೋಷಿಸಿದೆ. ಚೀನಾದ ನೆರವಿನಿಂದ 20 ದೊಡ್ಡ ನೌಕೆಗಳನ್ನು ಪಾಕಿಸ್ತಾನ ಹೊಂದಲಿದೆ. ಟರ್ಕಿ ಮತ್ತು ರೊಮೇನಿಯಾದಿಂದ ಕೆಲವು ನೌಕೆಗಳನ್ನು ಪಡೆಯಲಿದೆ. 'ಈ ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು ಚೀನಾದಲ್ಲಿ ನಿರ್ಮಿಸಲಾಗುತ್ತದೆ ಅಥವಾ ಚೀನಾದ ನೆರವು ಪಡೆದು ನಿರ್ಮಿಸಲಾಗುತ್ತದೆ. ಪಾಕಿಸ್ತಾನದ ನೌಕಾಪಡೆಯನ್ನು ಬಲಿಷ್ಠಗೊಳಿಸುವಲ್ಲಿ ಚೀನಾ ಬಹಳ ಸ್ಪಷ್ಟವಾದ ಹಿತಾಸಕ್ತಿ ಹೊಂದಿದೆ' ಎಂದು ತ್ರಿಪಾಠಿ ಹೇಳಿದರು.
ಪಾಕಿಸ್ತಾನವು ಚೀನಾದಿಂದ ಖರೀದಿಸುತ್ತಿರುವ ಎಂಟು ಜಲಾಂತರ್ಗಾಮಿಗಳ ಬಗ್ಗೆ ಪ್ರಶ್ನಿಸಿದಾಗ, ಈ ಜಲಾಂತರ್ಗಾಮಿಗಳು ಪಾಕಿಸ್ತಾನದ ಬಲವನ್ನು ಹೆಚ್ಚು ಮಾಡಲಿವೆ ಎಂದು ಉತ್ತರಿಸಿದರು. ಆದರೆ ಭಾರತದ ನೌಕಾಪಡೆಯು ಯಾವುದೇ ಆಕ್ರಮಣವನ್ನು ಹತ್ತಿಕ್ಕುತ್ತದೆ ಎಂದರು.