ಬದಿಯಡ್ಕ: ಖ್ಯಾತ ಯಕ್ಷಗಾನ ಕಲಾವಿದ, ಕಾರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ, ಕೇರಳ ಸರ್ಕಾರದ ಪಾರ್ತಿಸುಬ್ಬ ಪ್ರಶಸ್ತಿ ವಿಜೇತರಾದ ಮದಂಗಲ್ಲು ಆನಂದ ಭಟ್ ಪೂನಾ ಅವರು ಸೋಮವಾರ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶ್ರೀ ವನದುರ್ಗಾ ವನಶಾಸ್ತ ಭಜನಾ ಸಂಘ, ಮೀನಾಡಿಪಳ್ಳ ಅವರ ಭಜನಾ ಸೇವೆಯನ್ನು ದೀಪ ಬೆಳಗಿ ಉದ್ಘಾಟಿಸಿದರು.
ದೇವರನ್ನು ಅತಿ ಸುಲಭದಲ್ಲಿ ತೃಪ್ತಿ ಪಡಿಸುವ ಪೂಜೆ ಎಂದರೆ ಭಜನೆ..ಕನಕದಾಸರು ಭಜನೆ ಮತ್ತು ಭಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮನನ್ನು ಪಶ್ಚಿಮಕ್ಕೆ ಮುಖ ಮಾಡುವಂತೆ ಮಾಡಿದರು.ಬೇಡರ ಕಣ್ಣಪ್ಪ ಪೂಜೆ ಪುನಸ್ಕಾರ ಒಂದೂ ತಿಳಿಯದಿದ್ದರೂ ಪರಮೇಶ್ವರನನ್ನು ಪ್ರತ್ಯಕ್ಷಗೊಳಿಸಿದ್ದು ಭಕ್ತಿಯಿಂದ. ಈ ನಿಟ್ಟಿನಲ್ಲಿ ಭವದರ್ಶನಕ್ಕೆ ಸುಲಭ ಮಾರ್ಗವಾದ ಭಜನೆಗೆ ಆರಾಧನೆಯಲ್ಲಿ ಮಹತ್ವವಿದೆ ಎಂದವರು ಈ ಸಂದರ್ಭ ತಿಳಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಜಗನ್ನಾಥ ಶೆಟ್ಟಿ, ಬೆಂಗಳೂರಿನ ಕೆನರಾ ಬ್ಯಾಂಕ್ ಬಡಾವಣೆಯ ಸಂಪತ್ ಗಣಪತಿಯ ಆಡಳಿತ ಮಂಡಳಿಯ ಅಧ್ಯಕ್ಷ ಶಿವರಾಮ ಭಟ್ ಏತಡ್ಕ, ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ ಏತಡ್ಕ, ಡಾ.ವೈ.ಎಚ್.ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.