ಯಂಡಾಗಂಡಿ : ದುಷ್ಕರ್ಮಿಗಳು, ಮಹಿಳೆಯೊಬ್ಬರಿಗೆ ₹1.3 ಕೋಟಿ ಅಸಲು ಮತ್ತು ಬಡ್ಡಿ ಹಣಕ್ಕೆ ಬೇಡಿಕೆ ಇಟ್ಟು ಪೆಟ್ಟಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯ ಹೆಣವನ್ನು ಕಳುಹಿಸಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಯಂಡಾಗಂಡಿಯಲ್ಲಿ ಕುಟುಂಬದ ಮೂವರ ಜೊತೆ ವಾಸಿಸುತ್ತಿರುವ ನಾಗಾ ತುಳಸಿ ಎನ್ನುವರ ನಿರ್ಮಾಣ ಹಂತದ ಮನೆಗೆ ಗುರುವಾರ ಸಂಜೆ 4 ಗಂಟೆಗೆ ಅಪರಿಚಿತ ವ್ಯಕ್ತಿಗಳಿಂದ ಪಾರ್ಸಲ್ ಒಂದು ಬಂದಿತ್ತು. ಪಾರ್ಸಲ್ ತೆಗೆದು ನೋಡಿದಾಗ ಅದರಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಹೆಣ ಇತ್ತು. ಹೆಣದ ಜೊತೆಗೆ ಹಣದ ಬೇಡಿಕೆಯ ಪತ್ರವೂ ಇತ್ತು.
ಇದರಿಂದ ಆತಂಕಗೊಂಡ ನಾಗಾ ತುಳಸಿ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷಗೆ ರವಾನಿಸಿದ್ದಾರೆ.
ಪೊಲೀಸರು ಪತ್ರವನ್ನು ಪರಿಶೀಲಿಸಿದಾಗ, 'ನಿನಗೆ, ನಿನ್ನ ಕುಟುಂಬಕ್ಕೆ (ತುಳಸಿ) ಮೇಲಿಂದ ಮೇಲೆ ಇಂತಹ ಕೆಟ್ಟ ಅನುಭವ ಆಗಬಾರದೆಂದರೆ ₹1.3 ಕೋಟಿ ಅಸಲು, ಬಡ್ಡಿ ಹಣ ನೀಡಬೇಕು' ಎಂದು ಬೆದರಿಕೆ ಹಾಕಿ ಪತ್ರದಲ್ಲಿ ಬರೆಯಲಾಗಿದೆ ಎಂದು ಪೂರ್ವ ಗೋದಾವರಿ ಜಿಲ್ಲೆಯ ಎಸ್‌ಪಿ ಅದ್ನಾನ್ ನಯೀಂ ಅಸ್ಮಿ ಅವರು ಪಿಟಿಐಗೆ ತಿಳಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ತುಳಸಿ ಅವರ ಗಂಡ ನಾಪತ್ತೆಯಾಗಿದ್ದಾರೆ. ಅವರು 2008 ರಲ್ಲಿ ₹3 ಲಕ್ಷ ಸಾಲ ಮಾಡಿದ್ದರು. ಅದಾದ ನಂತರ ನಾಪತ್ತೆಯಾಗಿದ್ದಾರೆ. ಇನ್ನೂ ಅವರ ಸುಳಿವು ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೆಲ ವರ್ಷ ಗಂಡನ ಮನೆಯವರ ಜೊತೆ ವಾಸಿಸುತ್ತಿದ್ದ ತುಳಸಿ, ಇತ್ತೀಚೆಗೆ ತನ್ನ ತಾಯಿ ಮನೆಯ ಕುಟುಂಬದ ಇತರ ಮೂವರ ಜೊತೆ ಯಂಡಾಗಂಡಿಯ ಹೊರವಲಯದಲ್ಲಿ ವಾಸಿಸುತ್ತಿದ್ದರು. ಅಲ್ಲಿಯೇ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಎಸ್‌ಪಿ ವಿವರಿಸಿದ್ದಾರೆ.
ಮನೆ ನಿರ್ಮಾಣ ಮಾಡಲು ತುಳಸಿ ಅವರಿಗೆ ಅವರದೇ ಸಮುದಾಯದ ಶ್ರೀಮಂತರೊಬ್ಬರು ಸಹಾಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಹೇಳಿರುವುದಾಗಿ ಅವರು ತಿಳಿಸಿದ್ದಾರೆ.
ಕೊಳೆಯ ಸ್ಥಿತಿಯಲ್ಲಿ ಪತ್ತೆಯಾಗಿರುವ ವ್ಯಕ್ತಿ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದಾನೆ. ಈ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳಿಂದ ಕಾಣೆಯಾದವರ ವ್ಯಕ್ತಿಗಳ ಪಟ್ಟಿ ತಯಾರಿಸಲಾಗುತ್ತಿದೆ. ಏತನಧ್ಯೆ ಈ ಘಟನೆ ಬೆಳಕಿಗೆ ಬರುವ ಒಂದು ದಿನ ಮೊದಲು ನಾಗಾ ತುಳಸಿ ಅವರ ಕಿರಿಯ ಅಳಿಯನೊಬ್ಬ ಕಾಣೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸತ್ತಿರುವ ವ್ಯಕ್ತಿ ಯಾರು ಎಂಬುದು ಗೊತ್ತಾಗಲಿದೆ ಎಂದು ಅಸ್ಮಿ ಹೇಳಿದ್ದಾರೆ.