ಕುಂಬಳೆ : ಮಾರಕಾಯುಧಗಳೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಬಂಟ್ವಾಳ ಅಮ್ಟಾಡಿ ಲೊರೊಟ್ಟೋ ಗುತ್ತಾರ್ ನಿವಾಸಿ ಆಡ್ಲಿ ಜೋಕಿಂ ಕ್ಯಾಸ್ತಲಿನೋ ಎಂಬಾತನನ್ನು ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ವಿನೋದ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಸಂಚರಕ್ಕೆ ಬಳಸಿದ್ದ ಕಾರು ಹಾಗೂ ಚಾಕು, ಮುಖಗವಚ, ಮಚ್ಚುಗತ್ತಿ, ಚಾಕು ಸೇರಿದಂತೆ ವಿವಿಧ ಮಾರಕಾಯುಧ ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಬಂದ್ಯೋಡು-ಪೆರ್ಮುದೆ ರಸ್ತೆಯ ಗೋಳಿಯಡ್ಕದ ಹೋಟೆಲ್ ಸನಿಹ ಕಾರು ನಿಲ್ಲಿಸಿದ್ದ ಬಗ್ಗೆ ಸಂಶಯಗೊಂಡ ಪೊಲೀಸರು ಸನಿಹ ತೆರಳುತ್ತಿದ್ದಂತೆ ಕಾರು ಮುಂದಕ್ಕೆ ಚಲಿಸಲಾರಂಭಿಸಿತ್ತು. ತಕ್ಷಣ ಕಾರು ತಡೆದು ತಪಾಸಣೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಮಾರಕಾಯುಧ ಪತ್ತೆಯಾಗಿದೆ. ಯಾವ ಉದ್ದೇಶಕ್ಕಾಗಿ ಮಾರಕಾಯುಧದೊಂದಿಗೆ ಸಂಚರಿಸುತ್ತಿದ್ದನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.