ಸಿಯೋಲ್ : ದೇಶದಲ್ಲಿ 'ತುರ್ತು ಸೇನಾ ಆಡಳಿತ'ವನ್ನು ಜಾರಿ ಮಾಡಿರುವುದು ವಿವಾದಕ್ಕೀಡಾಗಿರುವ ನಡುವೆಯೇ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು, ರಕ್ಷಣಾ ಸಚಿವರನ್ನು ಬದಲಾಯಿಸಿದ್ದಾರೆ.
ಕಿಮ್ ಯೋಂಗ್ ಹ್ಯುನ್ ಅವರ ಬದಲಿಗೆ ಸೌದಿ ಅರೇಬಿಯಾದಲ್ಲಿ ದಕ್ಷಿಣ ಕೊರಿಯಾದ ರಾಯಭಾರಿಯಾಗಿರುವ ನಿವೃತ್ತ 'ಫೋರ್ ಸ್ಟಾರ್ ಜನರಲ್' ಚೋಯ್ ಬ್ಯುಂಗ್ ಹ್ಯುಕ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ಯೂನ್ ಅವರ ಕಚೇರಿ ಗುರುವಾರ ತಿಳಿಸಿದೆ.
ಚೋಯ್ ಅವರು ಅಧಿಕಾರ ವಹಿಸಿಕೊಳ್ಳುವವರೆಗೆ ಉಪ ರಕ್ಷಣಾ ಸಚಿವ ಕಿಮ್ ಸಿಯೋನ್ ಹೋ ಹಂಗಾಮಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸರ್ಕಾರವು 'ತುರ್ತು ಸೇನಾ ಆಡಳಿತ'ವನ್ನು ಹಿಂಪಡೆಯಲಿದೆ ಎಂದು ದೂರದರ್ಶನದ ಭಾಷಣದಲ್ಲಿ ಘೋಷಿಸಿದಾಗಿನಿಂದ ಯೂನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
'ವಿರೋಧ ಪಕ್ಷಗಳು ಸಂಸತ್ ಅನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ' ಎಂದು ಆರೋಪಿಸಿ ಯೂನ್ ಅವರು ಮಂಗಳವಾರದಿಂದ ದೇಶದಲ್ಲಿ 'ತುರ್ತು ಸೇನಾ ಆಡಳಿತ'ವನ್ನು ಜಾರಿಗೊಳಿಸಿದರು. ಯೂನ್ ನಿರ್ಧಾರದ ಬಗ್ಗೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಸೇನಾ ಆಡಳಿತ ಜಾರಿ ವಿರುದ್ಧ ಜನರು ತೀವ್ರ ಪ್ರತಿಭಟನೆ ನಡೆಸಿದ್ದರು. ನಂತರ ಬುಧವಾರ ಸೇನಾ ಆಡಳಿತವನ್ನು ಹಿಂಪಡೆಯುವುದಾಗಿ ಘೋಷಿಸಿದರು.
ಯೂನ್ ವಿರುದ್ಧ ಗೊತ್ತುವಳಿ ಮಂಡನೆ:
ದೇಶದಲ್ಲಿ ಮಿಲಿಟರಿ ಆಡಳಿತ ಹೇರಿಕೆಗೆ ಪ್ರಯತ್ನಿಸಿದ್ದ ಯೂನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಬೇಕೆಂದು ಸಂಸತ್ತಿನಲ್ಲಿ ಗುರುವಾರ ಗೊತ್ತುವಳಿ ಮಂಡನೆ ಮಾಡಲಾಗಿದೆ. ಈ ಗೊತ್ತುವಳಿ ಕುರಿತ ಮತ ಚಲಾವಣೆ ಪ್ರಕ್ರಿಯೆಯು ಶುಕ್ರವಾರ ಅಥವಾ ಶನಿವಾರ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.