ವಾಷಿಂಗ್ಟನ್: ಭಾರತಕ್ಕೆ 1.17 ಬಿಲಿಯನ್ ಡಾಲರ್ ಮೌಲ್ಯದ (ಅಂದಾಜು ₹9,907 ಕೋಟಿ) ಹೆಲಿಕಾಪ್ಟರ್ ಸಾಧನಗಳನ್ನು ಹಾಗೂ ಸಂಬಂಧಪಟ್ಟ ಕೆಲವು ಬಿಡಿಭಾಗಗಳನ್ನು ಮಾರಾಟ ಮಾಡಲು ಅಮೆರಿಕದ ಜೋ ಬೈಡನ್ ನೇತೃತ್ವದ ಆಡಳಿತವು ಒಪ್ಪಿಗೆ ನೀಡಿದೆ. ಈ ಕುರಿತು ಆಡಳಿತವು ಅಮೆರಿಕದ ಸಂಸತ್ತಿಗೆ ಮಾಹಿತಿ ನೀಡಿದೆ.
ಈ ಪ್ರಸ್ತಾವಿತ ಮಾರಾಟವು, ಜಲಾಂತರ್ಗಾಮಿಗಳಿಂದ ಭಾರತವು ಇಂದು ಎದುರಿಸುತ್ತಿರುವ ಮತ್ತು ಮುಂದೆ ಎದುರಿಸಬಹುದಾದ ಬೆದರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚು ಮಾಡಲಿದೆ ಎಂದು ರಕ್ಷಣಾ ಸಹಕಾರ ಸಂಸ್ಥೆಯು ಸಂಸತ್ತಿಗೆ ನೀಡಿರುವ ವಿವರಣೆಯಲ್ಲಿ ಹೇಳಿದೆ.
ಬೈಡನ್ ನೇತೃತ್ವದ ಆಡಳಿತವು ತನ್ನ ಅವಧಿ ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲಿ ಈ ತೀರ್ಮಾನ ಕೈಗೊಂಡಿದೆ. ಅಮೆರಿಕದ ಅಧ್ಯಕ್ಷರಾಗಿ ಚುನಾಯಿತ ಆಗಿರುವ ಡೊನಾಲ್ಡ್ ಟ್ರಂಪ್ ಅವರು ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.