ಕೋಲ್ಕತ್ತ: ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕೋಲ್ಕತ್ತದಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ, ಬಾಂಗ್ಲಾದ 'ಢಾಕಾಯ್ ಜಾಮದಾನಿ ಸೀರೆ'ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ಬಂಗಾಳ ಹಿಂದೂ ಸುರಕ್ಷಾ ಸಮಿತಿಯು, ಸಾಲ್ಟ್ ಲೇಕ್ ಅಂತರರಾಷ್ಟ್ರೀಯ ಬಸ್ ಟರ್ಮಿನಸ್ ಬಳಿ ಪ್ರತಿಭಟನೆಯನ್ನು ಆಯೋಜಿಸಿತ್ತು.
ಬಾಂಗ್ಲಾದೇಶಿ ಸರಕುಗಳನ್ನು ಬಹಿಷ್ಕರಿಸಲು ಪ್ರತಿಭಟನಕಾರರು ಕರೆ ನೀಡಿದರು.
ತ್ರಿವರ್ಣ ಧ್ವಜವನ್ನು ಅಗೌರವಿಸಿದರೆ ಮತ್ತು ಹಿಂದೂಗಳ ಮೇಲೆ ದಾಳಿ ಮುಂದುವರಿದರೆ ಭಾರತೀಯರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹಿಂದೂಗಳ ಸುರಕ್ಷತೆ ವಿಚಾರವಾಗಿ ಬಾಂಗ್ಲಾದೇಶದೊಂದಿಗೆ ರಾಜತಾಂತ್ರಿಕವಾಗಿ ಮಾತುಕತೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.