ನವದೆಹಲಿ: ಲೋಕಸಭಾ ಚುನಾವಣೆ ಜತೆಗೆ ವಿಧಾನಸಭಾ ಚುನಾವಣೆ ನಡೆಸಲು ಆಗದ ಸಂದರ್ಭ ಎದುರಾದರೆ ಅದಕ್ಕೆ ಅವಕಾಶ ಕಲ್ಪಿಸುವ ನಿಬಂಧನೆಯನ್ನು ಏಕಕಾಲದಲ್ಲಿ ಚುನಾವಣೆ ಜಾರಿಗೊಳಿಸುವ ಮಸೂದೆ ಒಳಗೊಂಡಿದೆ.
ಲೋಕಸಭೆಯ ಜತೆಗೆ ಏಕ ಕಾಲದಲ್ಲಿ ಚುನಾವಣೆ ನಡೆಯದ ವಿಧಾನಸಭೆಗೆ ಆ ಬಳಿಕವೂ ಚುನಾವಣೆ ನಡೆಸಬಹುದು ಎಂದು ರಾಷ್ಟ್ರಪತಿಯವರು ಆದೇಶ ಹೊರಡಿಸಬಹುದು
ಇದಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಂವಿಧಾನದ (129) ತಿದ್ದುಪಡಿ ಮಸೂದೆಯ 2ನೇ ಉಪ ಕಲಂ 5ರ ಪ್ರಕಾರ ಲೊಕಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯ ಜತೆಗೆ ಯಾವುದಾದರೂ ವಿಧಾನಸಭೆಯ ಚುನಾವಣೆ ನಡೆಸಲು ಆಗುವುದಿಲ್ಲ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟರೆ ಆ ಕುರಿತು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬಹುದು. ಅದನ್ನು ಆಧರಿಸಿ ರಾಷ್ಟ್ರಪತಿಯವರು ಆ ವಿಧಾನಸಭೆಯ ಚುನಾವಣೆಯನ್ನು ಆ ನಂತರ ನಡೆಸಲು ಆದೇಶ ಹೊರಡಿಸಬಹುದು.
ಹೊಸ ವಿಧಿ ಮೂರು ತಿದ್ದುಪಡಿ:
ಸಂವಿಧಾನದಲ್ಲಿ ಒಂದು ಹೊಸ ವಿಧಿ ಸೇರಿಸಲು ಹಾಗೂ ಮೂರು ವಿಧಿಗಳಿಗೆ ತಿದ್ದುಪಡಿ ತರಲು ಮಸೂದೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಹೊಸದಾಗಿ 82ಎ ವಿಧಿಯನ್ನು ಸೇರಿಸಲು ಮಸೂದೆ ಪ್ರಸ್ತಾಪಿಸಿದೆ. ಅದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ವಿಧಿ 83 (ಸಂಸತ್ತಿನ ಕಾಲಾವಧಿ) ವಿಧಿ 172 (ರಾಜ್ಯ ಶಾಸಕಾಂಗಗಳ ಕಾಲಾವಧಿ) ಹಾಗೂ ವಿಧಿ 327 ಅನ್ನು (ರಾಜ್ಯ ಶಾಸಕಾಂಗಗಳ ಚುನಾವಣೆ ಸಂಸತ್ತಿಗೆ ಅಧಿಕಾರ ಕುರಿತು) ತಿದ್ದುಪಡಿ ಮಾಡಬೇಕು ಎಂದು ಹೇಳಿದೆ.
ಅಧಿಕಾರಾವಧಿ: ಸಾರ್ವತ್ರಿಕ ಚುನಾವಣೆ ಬಳಿಕ ಲೋಕಸಭೆಯ ಮೊದಲ ಅಧಿವೇಶನದ ದಿನದಂದು ರಾಷ್ಟ್ರಪತಿಯವರು ಅಧಿಸೂಚನೆ ಹೊರಡಿಸಬೇಕು. ಅದನ್ನು ನೇಮಕದ ದಿನ ಎಂದು ಕರೆಯಲಾಗುತ್ತದೆ. ಆ ದಿನದಿಂದ ಲೋಕಸಭೆಯ ಅಧಿಕಾರಾವಧಿ ಐದು ವರ್ಷಗಳಾಗಿರುತ್ತವೆ. ಇದೇ ರೀತಿ ಚುನಾವಣೆ ಬಳಿಕ ನಿಗದಿತ ದಿನದಿಂದ ರಾಜ್ಯ ಶಾಸಕಾಂಗಗಳ ಅಧಿಕಾರಾವಧಿ ಆರಂಭವಾಗುತ್ತದೆ. ಅದು ಲೋಕಸಭೆಯ ಪೂರ್ಣಾವಧಿ ಜತೆಗೆ ಕೊನೆಯಾಗುತ್ತದೆ. ಹೀಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ನಡೆಯುವ ಸಾರ್ವತ್ರಿಕ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬಹುದು ಎಂದು ಮಸೂದೆ ಹೇಳಿದೆ.