ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಕಾರ್ಯವಿಧಾನ ರೂಪಿಸುವ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸುವ ಸಂದರ್ಭ ತನ್ನ 20ರಷ್ಟು ಸಂಸದರು ಗೈರಾಗಿದ್ದದ್ದನ್ನು ಬಿಜೆಪಿಯು ಗಂಭೀರವಾಗಿ ಪರಿಗಣಿಸಿದೆ.
ಮಸೂದೆ ಮಂಡನೆ ವೇಳೆ ಸದನದಲ್ಲಿ ಹಾಜರಿರಲು ಬಿಜೆಪಿಯು ತನ್ನ ಸದಸ್ಯರಿಗೆ 'ವಿಪ್' ನೀಡಿತ್ತು.
ಆದರೂ, ಇಂತಹ ನಿರ್ಣಾಯಕ ಸಂದರ್ಭದಲ್ಲಿ ಹಲವು ಸಂಸದರು ಗೈರುಹಾಜರಾಗಿದ್ದು ಬಿಜೆಪಿ ನಾಯಕರಿಗೆ ಕೋಪ ತರಿಸಿದೆ ಎಂದು ಮೂಲಗಳು ಹೇಳಿವೆ.
ಸದನದಲ್ಲಿ ಗೈರುಹಾಜರಾಗುವ ಬಗ್ಗೆ ಕೆಲವು ಸಂಸದರು ಪಕ್ಷದ ಮುಖ್ಯ ಸಚೇತಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು. ಗೈರು ಹಾಜರಾದ ಉಳಿದ ಸದಸ್ಯರಿಂದ ಕಾರಣ ಕೇಳಲು ಪಕ್ಷವು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಸೇರಿದಂತೆ ಕೆಲವು ಸಂಸದರು ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದರಿಂದ ಸಂಸತ್‌ನಲ್ಲಿ ಹಾಜರಿರಲಿಲ್ಲ.
ಬಿಜೆಪಿಯ ಮಿತ್ರಪಕ್ಷಗಳ ನಾಲ್ಕರಿಂದ ಐದು ಸಂಸದರು ಮತದಾನದ ವೇಳೆ ಉಪಸ್ಥಿತರಿರಲಿಲ್ಲ. ಅವರ ಬಗ್ಗೆಯೂ ವಿಚಾರಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಮಸೂದೆಯನ್ನು ಸದನದಲ್ಲಿ ಪರಿಚಯಿಸಬಹುದೇ ಎಂದು ಪ್ರಶ್ನಿಸಿ ಮತಕ್ಕೆ ಹಾಕಿದಾಗ, ಪರವಾಗಿ 269 ಹಾಗೂ ವಿರುದ್ಧವಾಗಿ 198 ಮತಗಳು ಬಿದ್ದವು.