ನವದೆಹಲಿ: ಅಕ್ಸಾಯ್ ಚಿನ್‌ನಲ್ಲಿ ಅಕ್ರಮವಾಗಿ ವಶಪಡಿಸಿಕೊಂಡಿರುವ ಭಾರತದ ಭೂಪ್ರದೇಶದ ಹೆಚ್ಚಿನ ಭಾಗವನ್ನು ಸೇರಿಸಿಕೊಂಡು ಚೀನಾ, ಎರಡು ಹೊಸ ಕೌಂಟಿಗಳನ್ನು (ಆಡಳಿತ ಪ್ರಾಂತ) ರಚಿಸಿದೆ.
ಅಕ್ಸಾಯ್ ಚಿನ್ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಚೀನಾ, ಕಳೆದ ಕೆಲ ವರ್ಷಗಳಿಂದ ವಿವಿಧ ರೀತಿಯ ಕ್ರಮಗಳನ್ನು ಅನುಸರಿಸುತ್ತಾ ಬಂದಿದೆ.
ಆದರೆ, ಗಡಿ ವಿವಾದಕ್ಕೆ ಸಂಬಂಧಿಸಿದ ಮಾತುಕತೆಯನ್ನು ಉಭಯ ದೇಶಗಳು ಪುನರಾರಂಭಿಸಿದ 10 ದಿನಗಳ ಬಳಿಕ ಈ ಹೊಸ ಬೆಳವಣಿಗೆ ನಡೆದಿದೆ.
ವಾಯವ್ಯ ಚೀನಾದ ಕ್ಸಿನ್‌ಜಿಯಾಂಗ್ ಉಯ್ಗರ್ ಸ್ವಾಯತ್ತ ಪ್ರದೇಶದ ಸ್ಥಳೀಯ ಸರ್ಕಾರವು 'ಹೆಯಾನ್' ಮತ್ತು 'ಹೆಕಾಂಗ್' ಹೆಸರಿನ ಎರಡು ಹೊಸ ಕೌಂಟಿಗಳನ್ನು ಸ್ಥಾಪಿಸಿರುವುದಾಗಿ ಘೋಷಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
'ಹೋಟಾನ್ ಪ್ರಾಂತ್ಯದಿಂದ ನಿಯಂತ್ರಿಸಲ್ಪಡುವ ಎರಡು ಕೌಂಟಿಗಳ ಸ್ಥಾಪನೆಯನ್ನು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಕೇಂದ್ರ ಸಮಿತಿ ಮತ್ತು ಸ್ಟೇಟ್ ಕೌನ್ಸಿಲ್ ಅನುಮೋದಿಸಿದೆ' ಎಂದು ವರದಿ ತಿಳಿಸಿದೆ.
ಹಾಂಗ್‌ಲಿಯು ಮತ್ತು ಕ್ಸೆಯಿಡುಲಾ ಟೌನ್‌ಷಿಪ್‌ಗಳನ್ನು ಕ್ರಮವಾಗಿ ಹೆಯಾನ್ ಹಾಗೂ ಹೆಕಾಂಗ್ ಕೌಂಟಿಗಳ 'ಕೌಂಟಿ ಸೀಟ್' (ಆಡಳಿತದ ಕೇಂದ್ರ ಕಚೇರಿ) ಆಗಿ ಹೆಸರಿಸಲಾಗಿದೆ.
ಅಕ್ಸಾಯ್ ಚಿನ್‌ನಲ್ಲಿ ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಭಾರತ ಆರೋಪಿಸಿರುವ ಪ್ರದೇಶದ ಸುಮಾರು 38 ಸಾವಿರ ಚದರ ಕಿ.ಮೀ.ನಷ್ಟು ದೊಡ್ಡ ಭಾಗವನ್ನು ಹೆಯಾನ್ ಕೌಂಟಿ ಒಳಗೊಂಡಿದೆ.
ಅಕ್ರಮವಾಗಿ ವಶಪಡಿಸಿಕೊಂಡಿರುವ ತನ್ನ ಭೂಪ್ರದೇಶದಲ್ಲಿ ಚೀನಾ ಎರಡು ಕೌಂಟಿಗಳನ್ನು ರಚಿಸಿರುವುದು ಭಾರತದ ಗಮನಕ್ಕೆ ಬಂದಿದೆಯಾದರೂ, ಈ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಚೀನಾದ ಇಂತಹ ಏಕಪಕ್ಷೀಯ ನಡೆಗಳು ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ದ್ವಿಪಕ್ಷೀಯ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೂಲಗಳು ತಿಳಿಸಿವೆ.