ಮುಂಬೈ: ಇಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಕಚೇರಿಗೆ ಗುರುವಾರ ಮಧ್ಯಾಹ್ನ ಬಾಂಬ್ ಬೆದರಿಕೆ ಬಂದಿದೆ. ರಷ್ಯನ್ ಭಾಷೆಯಲ್ಲಿ ಬರೆಯಲಾಗಿರುವ ಬೆದರಿಕೆ ಪತ್ರವನ್ನು ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಕಳುಹಿಸಲಾಗಿದೆ.
ತಿಂಗಳ ಅವಧಿಯಲ್ಲಿ ಹೀಗೆ ಬೆದರಿಕೆ ಬರುತ್ತಿರುವುದು ಇದು ಎರಡನೇ ಬಾರಿ.
ಪ್ರಕರಣ ಸಂಬಂಧ ಮುಂಬೈನ ಮಾತಾ ರಾಮಾ ಬಾಯಿ ಮಾರ್ಗ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಬೆದರಿಕೆ ಪತ್ರ ಕಳುಹಿಸಿದವರ ಪತ್ತೆಗೆ ಪ್ರಯತ್ನ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 16ರಂದು ಆರ್‌ಬಿಐನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಲಾಗಿತ್ತು. 'ಲಷ್ಕರ್-ಎ-ತಯಬಾ' ಸಂಘಟನೆಯ ಸಿಇಒ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ. ಕರೆ ಕಟ್ ಮಾಡುವುದಕ್ಕೂ ಮೊದಲು ಹಾಡು ಹಾಡಿದ್ದ ಎಂದು ವರದಿಯಾಗಿತ್ತು.