ಕಾವ್ಯಾತ್ಮಕ ಶೈಲಿಯಲ್ಲಿ ಸಮಾರೋಪ ಭಾಷಣ ಮಾಡಿದ ಸಾಹಿತಿ ಸಿ.ಪಿ ಕೃಷ್ಣಕುಮಾರ್, 'ಸುವರ್ಣ ಕರ್ನಾಟಕದ ಸಂಭ್ರಮದ ನಡುವೆಯೂ ಸಾಲುಸಾಲು ಸವಾಲುಗಳು ಇದ್ದು 'ಕಂಗ್ಲಿಷ್'ನಿಂದಾಗಿ ಕನ್ನಡನಾಡು ಕಂಗಾಲಾಗಿದೆ. ರಾಜ್ಯದಲ್ಲಿ ಯಾವ ಸರ್ಕಾರವೂ ಕನ್ನಡದ ಬಗ್ಗೆ ಇಚ್ಛಾಶಕ್ತಿ ತೋರಿಸಿಲ್ಲ. ಕೇಂದ್ರದ ಪಕ್ಷಪಾತ ಧೋರಣೆ ಮತ್ತು ಕನ್ನಡಿಗರ ಆಸಕ್ತಿ ಕೊರತೆಯೂ ಕನ್ನಡ ದುರ್ಬಲಗೊಳ್ಳಲು ಕಾರಣ' ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ 'ಕನ್ನಡ ಶಾಲೆಗಳಿಗೆ ಸರ್ಕಾರಗಳಿಂದ ಪ್ರೋತ್ಸಾಹ ಸಿಗುತ್ತಿಲ್ಲ, ನಾನು ಮುಖ್ಯಮಂತ್ರಿಯಾಗಿದ್ದಾಗ 166 ಪ್ರಥಮ ದರ್ಜೆ ಕಾಲೇಜು, 500 ಜೂನಿಯರ್ ಕಾಲೇಜು, 1400 ಹೈಸ್ಕೂಲ್‌ಗಳನ್ನು ಆರಂಭಿಸಿದ್ದು ಪ್ರತಿ ಶಾಲೆಯ ಕಟ್ಟಡಕ್ಕೆ ₹ 2 ಕೋಟಿ ಅನುದಾನ ನೀಡಲಾಗಿತ್ತು, ಶಿಕ್ಷಕರ ನೇಮಾಕಾತಿಗೂ ಆದ್ಯತೆ ನೀಡಲಾಗಿತ್ತು' ಎಂದರು.
'ಭವಿಷ್ಯದ ಆತಂಕದಿಂದಾಗಿ ಪಾಲಕರು ಮಕ್ಕಳನ್ನು ಇಂಗ್ಲಿಷ್ ಕಳುಹಿಸಲು ಬಯಸುತ್ತಾರೆ. ನಾನು ಕೂಡ ಪಬ್ಲಿಕ್ ಶಾಲೆ ಆರಂಭಿಸಲು ಪ್ರಯತ್ನ ಮಾಡಿದ್ದೆ. ಅದಕ್ಕಾಗಿ ಸಮ್ಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರಲ್ಲಿ ಕ್ಷಮೆ ಕೋರುತ್ತೇನೆ' ಎಂದು ಅವರು ಹೇಳಿದರು.
'ಭಾಷೆ ಉಳಿಯಬೇಕಾದರೆ ಸಾಹಿತ್ಯ ಓದಬೇಕು. ಸಾಹಿತ್ಯದ ಸಂಗವಿಲ್ಲದೆ ಈಗ ಸಂಬಂಧಗಳು ಹಾಳಾಗುತ್ತಿವೆ. ಕನ್ನಡ ಚಿತ್ರರಂಗವೂ ಈ ಕುರಿತು ಚಿಂತನೆ ನಡೆಸಬೇಕು' ಎಂದರು.
ಸರ್ಕಾರದ ಗಮನಕ್ಕೆ ಬರಲಿ:
'ಸಮ್ಮೇಳನದ ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತರಬೇಕು, ಅನುಷ್ಠಾನದ ಬಗ್ಗೆ ಮುಂದಿನ ಸಮ್ಮೇಳನದಲ್ಲಿ ಮಾಹಿತಿ ನೀಡಬೇಕು' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ಸೂಚಿಸಿದರು.
'ಸರ್ಕಾರಕ್ಕೆ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಮಾಡುವ ಉಮೇದು ಇಲ್ಲ. ಶಾಲೆಗಳನ್ನು ಮುಚ್ಚಲು ಹೆದರುತ್ತಿರುವುದರಿಂದ ಉಳಿಸಿಕೊಂಡಿದೆ' ಎಂದು ದೂರಿದರು.
ಅದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, 'ನಿರ್ಣಯಗಳ ಬಗ್ಗೆ ಚರ್ಚಿಸಲು ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಾಗುವುದು' ಎಂದು ತಿಳಿಸಿದರು.
ಮಂಡ್ಯದಲ್ಲಿ ಭಾನುವಾರ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆದಿಚುಂಚನಗಿರಿ ಸಂಸ್ಥಾನಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ- ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ - ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತುಕತೆಯಲ್ಲಿ ತೊಡಗಿದ್ದರು.ಬಳ್ಳಾರಿಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ
ಮಂಡ್ಯ: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಮಂಡ್ಯದಲ್ಲಿ ಭಾನುವಾರ ತೆರೆ ಬಿದ್ದಿದ್ದು ಮುಂದಿನ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಲಿದೆ. ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಈ ವಿಷಯವನ್ನು ಪ್ರಕಟಿಸಿದರು. ನಗರದ ಹೋಟೆಲ್‌ನಲ್ಲಿ ಬೆಳಿಗ್ಗೆ ನಡೆದ ಕಸಾಪ ಜಿಲ್ಲಾ ಘಟಕಗಳ ಪ್ರತಿನಿಧಿಗಳ ಸಭೆಯಲ್ಲಿ ಮುಂದಿನ ಸಮ್ಮೇಳನದ ಸ್ಥಳವನ್ನು ನಿಗದಿ ಮಾಡಲಾಗಿದೆ. ಚಿಕ್ಕಮಗಳೂರು ಮತ್ತು ನವದೆಹಲಿಯಲ್ಲಿ ಸಮ್ಮೇಳನ ಆಯೋಜಿಸುವ ಕುರಿತು ಚರ್ಚೆ ನಡೆದಿದ್ದು ಬಳ್ಳಾರಿ ಜಿಲ್ಲೆಯನ್ನು ಅಂತಿಮಗೊಳಿಸಲಾಯಿತು ಎಂದು ಹೇಳಲಾಗಿದೆ.