ನವದೆಹಲಿ: 2016ರಲ್ಲಿ ನಾಲ್ಕು ವರ್ಷ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆತನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಶಂಭುಭಾಯ್ ರಾಯ್ಸಂಗ್‌ಭಾಯಿ ಪಡಿಹಾರ್ ಎಂಬಾತನಿಗೆ ಜೀವದಾನ ನೀಡಿರುವ ಸುಪ್ರೀಂ ಕೋರ್ಟ್, ಶಿಕ್ಷೆಯನ್ನು 25 ವರ್ಷಗಳ ಜೈಲುವಾಸಕ್ಕೆ ಮಿತಿಗೊಳಿಸಿದೆ.
ಬಾಲಕನನ್ನು ಗುರಿಯಾಗಿಸಿಕೊಂಡು ನಡೆದ ಅಪರಾಧವು ಪೈಶಾಚಿಕ ಕೃತ್ಯವಾಗಿತ್ತು ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಅರವಿಂದ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ತ್ರಿಸದಸ್ಯ ಪೀಠವು, ಈ ಪ್ರಕರಣದಲ್ಲಿ ಅಪರಾಧಿಯಲ್ಲಿ ಸುಧಾರಣೆ ಕಂಡುಬರುವ ಸಾಧ್ಯತೆಯು ಸಂಪೂರ್ಣವಾಗಿ ಇಲ್ಲವಾಗಿಲ್ಲ ಎಂದು ಹೇಳಿದೆ.
ಈ ಪ್ರಕರಣವು ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೂಡ ಪೀಠ ಹೇಳಿದೆ. 'ಶಿಕ್ಷೆ ಪ್ರಮಾಣವನ್ನು ಮುಂದೆ ಕಡಿಮೆ ಮಾಡಲು ಅವಕಾಶ ಕಲ್ಪಿಸದೆ, 25 ವರ್ಷಗಳ ಜೈಲುವಾಸವು ಈ ಪ್ರಕರಣದಲ್ಲಿ ಸೂಕ್ತವಾಗುತ್ತದೆ' ಎಂದು ಪೀಠವು ಹೇಳಿದೆ.
ಅಪರಾಧಿಯು ತನಗೆ ಗುಜರಾತ್ ಹೈಕೋರ್ಟ್ 2019ರಲ್ಲಿ ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ವಿಚಾರಣಾ ನ್ಯಾಯಾಲಯವು ಈತನಿಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಈತನು ನಾಲ್ಕು ವರ್ಷ ವಯಸ್ಸಿನ ಬಾಲಕನನ್ನು ಅಪಹರಿಸಿ, ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆತನನ್ನು ಹತ್ಯೆ ಮಾಡಿದ್ದ ಎಂದು ಪ್ರಾಸಿಕ್ಯೂಷನ್ ಹೇಳಿತ್ತು.