ಅಹಮದಾಬಾದ್: ಉದ್ಯಮಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಬಂಧಿಸಲಾಗಿದ್ದ 42 ವರ್ಷದ ಮಾಂತ್ರಿಕರೊಬ್ಬರು ಗುಜರಾತ್ ಪೊಲೀಸರ ವಶದಲ್ಲಿದ್ದ ವೇಳೆ ಭಾನುವಾರ ಮೃತಪಟ್ಟಿದ್ದಾರೆ. ಆರೋಪಿಯು ರಾಸಾಯನಿಕ ಮಿಶ್ರಿತ ಪಾನೀಯ ನೀಡಿ 12 ವ್ಯಕ್ತಿಗಳನ್ನು ಕೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 3ರ ಬೆಳಿಗ್ಗೆ 1 ಗಂಟೆ ಸುಮಾರಿಗೆ ಉದ್ಯಮಿಯೊಬ್ಬರನ್ನು ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ, ತಮ್ಮ ಬಳಿಗೆ ಹಣದ ಸಮೇತ ಕರೆಸಿಕೊಂಡು ಹತ್ಯೆಗೆ ಮಾಂತ್ರಿಕ ಸಂಚು ರೂಪಿಸುತ್ತಿದ್ದರು. ಈ ಕುರಿತು ಅವರ ಟ್ಯಾಕ್ಸಿ ಚಾಲಕನೇ ನೀಡಿದ ಸುಳಿವು ಆಧರಿಸಿ ಸರ್‌ಕೆಜ್ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಡಿಸೆಂಬರ್ 10ರ 3 ಗಂಟೆಯವರೆಗೆ ಪೊಲೀಸರ ವಶಕ್ಕೆ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
'ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನವಲ್‌ಸಿಂಗ್ ಚಾವ್ಡಾ ಅವರು ಠಾಣೆಯಲ್ಲಿ ಅನಾರೋಗ್ಯದಿಂದ ಕುಸಿದುಬಿದ್ದರು, ತಕ್ಷಣವೇ ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಪಾಸಣೆ ನಡೆಸಿದ ವೈದ್ಯರು ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿಯೇ ಚಾವ್ಡಾ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಸಾವಿಗೂ ಮುನ್ನ ಅವರನ್ನು ವಿಚಾರಣೆ ನಡೆಸಿದ್ದ ವೇಳೆ 12 ಮಂದಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಂತ್ರಿಕ ವಿದ್ಯೆ ಹೆಸರಲ್ಲಿ ಕೊಲೆ: 'ಸುರೇಂದ್ರ ನಗರ ಜಿಲ್ಲೆಯ ವದಾವಾನ್‌ನಲ್ಲಿ ಆಶ್ರಮ ಹೊಂದಿದ್ದ ನವಲ್‌ಸಿಂಗ್ ತನ್ನನ್ನು ತಾನು 'ಮಾಂತ್ರಿಕ' ಎಂದು ಕರೆಸಿಕೊಂಡಿದ್ದರು. ಮಂತ್ರ ಹಾಗೂ ತಂತ್ರ ವಿದ್ಯೆ ಕಲಿತಿರುವುದಾಗಿ ತಿಳಿಸಿ, ಹಣ ದ್ವಿಗುಣ, ಶತ್ರುನಾಶ ಪಡಿಸುವ ಶಕ್ತಿ ಹೊಂದಿರುವುದಾಗಿ ನಂಬಿಸಿದ್ದರು. ಅತೀಂದ್ರಿಯ ಆಚರಣೆ ಮಾಡುವ ವೇಳೆ ಸಂತ್ರಸ್ತರಿಗೆ ನೀರಿನಲ್ಲಿ ಕರಗಿದ 'ಸೋಡಿಯಂ ನೈಟ್ರೇಟ್' ಕುಡಿಯುವಂತೆ ತಿಳಿಸುತ್ತಿದ್ದರು. ಇದನ್ನು ಕುಡಿದ 10ರಿಂದ 15 ನಿಮಿಷದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆಯುತ್ತಿದ್ದರು. ಈ ರೀತಿ 12 ಮಂದಿಯನ್ನು ಕೊಂದಿರುವುದಾಗಿ ಚಾವ್ಡಾ ತಪ್ಪೊಪ್ಪಿಕೊಂಡಿದ್ದರು' ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಿವಂ ವರ್ಮಾ ತಿಳಿಸಿದರು.
'ಅಹಮದಾಬಾದ್-1, ಸುರೇಂದ್ರ ನಗರ- 6, ರಾಜ್‌ಕೋಟ್‌ನಲ್ಲಿ ತನ್ನದೇ ಕುಟುಂಬದ ಮೂವರು ಹಾಗೂ ಮೊರ್ಬಿ ಹಾಗೂ ಕಛ್ ಜಿಲ್ಲೆಯಲ್ಲಿ ತಲಾ ಒಬ್ಬರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು' ಎಂದರು.
ಗೊತ್ತಾಗಿದ್ದು ಹೇಗೆ..?
2021ರ ಆಗಸ್ಟ್‌ನಲ್ಲಿ ಅಹಮದಾಬಾದ್‌ನ ಅಸ್‌ಲಾಲಿ ಪ್ರದೇಶದಲ್ಲಿ ಅಪಘಾತದ ಸ್ಥಿತಿಯಲ್ಲಿ ವಿವೇಕ್ ಎಂಬುವವರ ದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ವಿಷಪ್ರಾಶನದಿಂದ ಮೃತಪಟ್ಟಿದ್ದು ದೃಢಪಟ್ಟಿತ್ತು. ವಿವೇಕ್ ಸಾವಿನ ಕುರಿತು ಅವರ ಸಹೋದರ ಜಿಗರ್ ಪೊಲೀಸರಿಗೆ ದೂರು ನೀಡಿ ತನಿಖೆ ನಡೆಸುವಂತೆ ಕೋರಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.
ಸಹೋದರನ ಸಾವಿನ ಕುರಿತು ಜಿಗರ್ ಖುದ್ದು ತನಿಖೆ ಆರಂಭಿಸಿದ್ದರು. ಸಾಯುವ ಮುನ್ನ ಚವ್ಡಾ ಜೊತೆ ಸಹೋದರ ನಿರಂತರ ಸಂಪರ್ಕದಲ್ಲಿರುವುದನ್ನು ಪತ್ತೆಹಚ್ಚಿದ್ದರು. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮಾಂತ್ರಿಕನ ಬಳಿಯಿದ್ದ ಕಾರಿಗೆ ಜಿಗಾರ್ ಚಾಲಕನಾಗಿ ಸೇರಿಕೊಂಡಿದ್ದರು. ನಂತರ, ಅವರ ಚಲನವಲನ ಗಮನಿಸಿ, ಮಾಹಿತಿ ಸಂಗ್ರಹಿಸಿದ್ದರು. ಇತ್ತೀಚಿಗೆ ಉದ್ಯಮಿಯೊಬ್ಬರ ಕೊಲೆಗೆ ಸಂಚು ರೂಪಿಸಲು ಯತ್ನಿಸುತ್ತಿದ್ದ ವೇಳೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ತಿಳಿಸಿದ್ದರು. ಅದರಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಚಾವ್ಡಾರನ್ನು ಬಂಧಿಸಿದ್ದರು.
'14 ವರ್ಷದ ಹಿಂದೆ ತನ್ನ ಅಜ್ಜಿ, ವರ್ಷದ ಹಿಂದೆ ತಾಯಿ ಹಾಗೂ ಚಿಕ್ಕಪ್ಪನನ್ನು ಮಾಂತ್ರಿಕನೇ ಕೊಲೆಗೈದಿರುವುದು ತನಿಖೆ ವೇಳೆ ಕಂಡುಬಂದಿದೆ' ಎಂದು ಡಿಸಿಪಿ ವರ್ಮಾ ತಿಳಿಸಿದರು.
'ಡ್ರೈ ಕ್ಲೀನಿಂಗ್‌ಗೆ ಬಳಸುತ್ತಿದ್ದ ಸೋಡಿಯಂ ನೈಟ್ರೇಟ್ ಅನ್ನು ಪ್ರಯೋಗಾಲಯದಿಂದ ಪಡೆದುಕೊಂಡು ಚಾವ್ಡಾ ಈ ಕೃತ್ಯವೆಸಗುತ್ತಿದ್ದರು. ಅವರ ಕಾರು ಪರಿಶೀಲನೆ ನಡೆಸಿದ ವೇಳೆ ಬಿಳಿ ಪೌಡರ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ' ಎಂದರು.