ಸಿರ್ಸಾ: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರ ಅಂತ್ಯಕ್ರಿಯೆ ಹುಟ್ಟೂರಾದ ಸಿರ್ಸಾ ಜಿಲ್ಲೆಯ ತೇಜಾ ಖೇರಾ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿತು.
ಭಾರತೀಯ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಮತ್ತು ಹರಿಯಾಣದಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಓಂ ಪ್ರಕಾಶ್ ಚೌಟಾಲಾ (89) ಅವರು ಶುಕ್ರವಾರ ನಿಧನರಾಗಿದ್ದರು.
ಚೌಟಾಲಾ ಅವರು ಮಾಜಿ ಉಪ ಪ್ರಧಾನಿ ದಿವಂಗತ ದೇವಿ ಲಾಲ್ ಅವರ ಮಗ. ಅವರಿಗೆ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. ಅವರ ಪತ್ನಿ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೇರಿದಂತೆ ಇತರ ಪ್ರಮುಖರು ಅಂತಿಮ ನಮನ ಸಲ್ಲಿಸಿದರು.