ತಮಿಳುನಾಡು: ಕಾಲಿವುಡ್ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿರುವ ನಟ ಮನ್ಸೂರ್ ಅಲಿ ಖಾನ್ ಅವರ ಪುತ್ರ ಅಲಿ ಖಾನ್ ತುಘಲಕ್ ನನ್ನು ಡ್ರಗ್ಸ್ ಹೊಂದಿರುವ ಮತ್ತು ಮಾರಾಟದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ತಿರುಮಂಗಲಂ ಪೊಲೀಸರು ಸಂಪೂರ್ಣ ತನಿಖೆ ನಡೆಸಿದ ನಂತರ ಅಲಿ ಖಾನ್ ತುಘಲಕ್ ಸೇರಿ ಇತರ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳೊಂದಿಗೆ ತುಘಲಕ್ ಗೆ ನಂಟು ಇದೆ ಎಂಬ ಗುಪ್ತಚರ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಇವರಲ್ಲಿ ಹಲವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಮಾದಕ ವಸ್ತು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದರು.
ಸೈಯದ್ ಸಾಕಿ, ಮೊಹಮ್ಮದ್ ರಿಯಾಸ್ ಅಲಿ ಮತ್ತು ಫೈಸಲ್ ಅಹ್ಮದ್ ಜೊತೆ ತುಘಲಕ್ ನನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ನಾಲ್ವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ತಮಿಳುನಾಡಿನಲ್ಲಿ ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್‌ನ ಹಲವಾರು ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಶ್ರೀಲಂಕಾ, ಮಲೇಷ್ಯಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ.
ತಮಿಳುನಾಡಿಗೆ ಮೆಥಾಂಫೆಟಮೈನ್ ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡುವ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಎಂದು ನಂಬಲಾದ ವಿದೇಶಿ ಪ್ರಜೆಯನ್ನು ಚೆನ್ನೈ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ಪ್ರಕರಣದಲ್ಲಿ ಫಿಲಿಪ್ ಸೇರಿದಂತೆ 12 ಮಂದಿಯನ್ನು ಅರುಂಬಕ್ಕಂ ಪೊಲೀಸರು ಬಂಧಿಸಿದ್ದಾರೆ. ಮನ್ಸೂರ್ ಅಲಿಖಾನ್ ಸೌತ್ ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಫೇಮಸ್ ಆಗಿದ್ದಾರೆ. ಅವರು ನಟ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರೊಂದಿಗೆ ಸೂಪರ್ಹಿಟ್ ಚಿತ್ರ 'ಲಿಯೋ' ದಲ್ಲಿ ಕೆಲಸ ಮಾಡಿದ್ದರು.
ಈ ವರ್ಷದ ಆರಂಭದಲ್ಲಿ ಮನ್ಸೂರ್ ಅಲಿ ಖಾನ್ ಕೂಡ ನಟಿ ತ್ರಿಷಾ ವಿರುದ್ಧ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿ ಮಾಡಿದ್ದರು. ಖಾನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ನಾನು ತ್ರಿಷಾ ಅವರೊಂದಿಗೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ದೃಶ್ಯವಿರುತ್ತದೆ ಎಂದು ನಾನು ಭಾವಿಸಿದ್ದೆ ಈ ಹಿಂದಿನ ಚಿತ್ರಗಳಲ್ಲಿ ನಾನು ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ ಮತ್ತು ಇದು ನನಗೆ ಹೊಸದಲ್ಲ ಎಂದು ಹೇಳಿದರು.