ನವದೆಹಲಿ: ಕಾಂಗ್ರೆಸ್‌ನ 'ಗರೀಬಿ ಹಠಾವೋ' ಘೋಷಣೆ ಅತಿದೊಡ್ಡ ಜುಮ್ಲಾ ಎಂಬುದು ದೇಶದ ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಲೋಕಸಭೆಯಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವ ಇತಿಹಾಸವು ಪ್ರಪಂಚದಾದ್ಯಂತದ ಇತರೆ ದೇಶಗಳಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.
'ತಮ್ಮದೇ ಪಕ್ಷದ ಸಿದ್ಧಾಂತವನ್ನು ಅನುಸರಿಸದವರು ದೇಶದ ಸಂವಿಧಾನವನ್ನು ಹೇಗೆ ಅನುಸರಿಸುತ್ತಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
'ಕಾಂಗ್ರೆಸ್ ಯಾವಾಗಲೂ ಮೀಸಲಾತಿಯನ್ನು ವಿರೋಧಿಸುತ್ತದೆ. ನೆಹರೂ ಅವರು ಮೀಸಲಾತಿಯನ್ನು ವಿರೋಧಿಸಿ ಸುದೀರ್ಘ ಪತ್ರಗಳನ್ನು ಬರೆದಿದ್ದರು. ಮಂಡಲ್ ಆಯೋಗದ ವರದಿಯನ್ನು ಹಲವು ವರ್ಷಗಳ ಕಾಲ ಶೈತ್ಯಾಗಾರದಲ್ಲಿ ಇರಿಸಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದ ಬಳಿಕವೇ ಒಬಿಸಿ ಮೀಸಲಾತಿ ಜಾರಿಗೆ ಬಂದಿತು' ಎಂದು ಮೋದಿ ಹೇಳಿದ್ದಾರೆ.
'ದೇಶದ ಏಕತೆಗಾಗಿ ಸಂವಿಧಾನ ತಿದ್ದುಪಡಿ ಮೂಲಕ ಒಬಿಸಿ ಮತ್ತು ಇಡಬ್ಲ್ಯೂಎಸ್‌ಗಳಿಗೆ ಮಾನ್ಯತೆ ನೀಡಿದ್ದೇವೆ. ಜತೆಗೆ, ಹಿಂದಿನ ಸರ್ಕಾರಗಳು ಮಾಡಿದ ತಪ್ಪುಗಳನ್ನು ಸರಿಪಡಿಸಲು ನಮ್ಮ ಸರ್ಕಾರ ಸಂವಿಧಾನ ತಿದ್ದುಪಡಿಗಳನ್ನು ಮಾಡಿದ್ದೇವೆ ಎಂದಿದ್ದಾರೆ.
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನಗೊಳಿಸುವುದು ನಿಶ್ಚಿತ. ಜಾತ್ಯತೀತ ನಾಗರಿಕ ಸಂಹಿತೆಗಾಗಿ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದೂ ತಿಳಿಸಿದ್ದಾರೆ.