ಕಾಸರಗೋಡು: ರಾಜ್ಯ ರಾಜಕೀಯ ರಂಗದಲ್ಲಿ ಕೋಲಾಹಲ ಸೃಷ್ಟಿಸಿದ್ದ ಕಲ್ಯೋಟ್ ಅವಳಿ ಕೊಲೆ ಪ್ರಕರಣದ ತೀರ್ಪು ಡಿ. 28ರಂದು ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ ಪೆರಿಯ ಕಲ್ಯೋಟ್ ಪ್ರದೇಶದಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.
2019 ಫೆಬ್ರವರಿ 17 ರಂದು ರಾತ್ರಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್ ಲಾಲ್ ಎಂಬವರನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿತ್ತು. ನಂತರ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದ್ದು, ಎರ್ನಾಕುಲಂ ಸಿಬಿಐ ನ್ಯಾಯಾಲಯದಿಂದ ಡಿ. 28ರಂದು ತೀರ್ಪು ಹೊರಬೀಳಲಿದೆ. ಅವಳಿ ಕೊಲೆ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಜಿಲ್ಲೆಯಲ್ಲಿ ಬಿಗು ಭದ್ರತೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ. ಅವರ ನಿರ್ದೇಶನದಲ್ಲಿ ಬೇಕಲ ಡಿವೈಎಸ್ಪಿ ವಿ.ವಿ ಮನೋಜ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಸದಸ್ಯನಾಗಿದ್ದ ಎ. ಪೀತಾಂಬರನ್ ಮೊದಲ ಆರೋಪಿಯಾಗಿದ್ದು, ಒಟ್ಟು 14ಮಂದಿ ಆರೋಪಿಗಳಿದ್ದಾರೆ. ಆರಂಭದಲ್ಲಿ ಸ್ಥಳೀಯ ಪೆÇಲೀಸರು ಹಾಗೂ ಅನಂತರ ಕ್ರೈಂಬ್ರಾಂಚ್ ತನಿಖೆ ನಡೆಸಿತ್ತು. ಆದರೆ ಕೊಲೆಗೀಡಾದವರ ಹೆತ್ತವರು ನೀಡಿದ ಅರ್ಜಿಯನ್ವಯ ರಾಜ್ಯ ಹೈಕೋರ್ಟ್ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಮಾಜಿ ಶಾಸಕ ಕೆ.ವಿ.ಕುಞರಾಮನ್ ಸಹಿತ 10 ಮಂದಿಯನ್ನು ಸಿಬಿಐ ಅನಂತರ ಆರೋಪಿಗಳನ್ನಾಗಿ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದ್ದು ಇವರು ಜಾಮೀನು ಪಡೆದುಕೊಮಡಿದ್ದರು.