ನವದೆಹಲಿ: ಯುವ ವಯಸ್ಕರ ಹಠಾತ್ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಐಸಿಎಂಆರ್ ಅಧ್ಯಯನದಿಂದ ತಿಳಿದುಬಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
ಕೋವಿಡ್‌ಗೂ ಮೊದಲು ಆಸ್ಪತ್ರೆಗೆ ದಾಖಲಾಗಿದ್ದುದು, ದಿಢೀರ್ ಸಾವುಗಳು ಆಗಿರುವ ಕೌಟುಂಬಿಕ ಹಿನ್ನೆಲೆ ಮತ್ತು ಜೀವನಶೈಲಿ ಬದಲಾವಣೆಗಳು ಹಠಾತ್ ಸಾವಿನ ಸಾಧ್ಯತೆ ಹೆಚ್ಚಿಸಿವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕಳೆದ ವರ್ಷ ಮೇ-ಆಗಸ್ಟ್ ಅವಧಿಯಲ್ಲಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 47 ಆಸ್ಪತ್ರೆಗಳಲ್ಲಿ 'ಭಾರತದಲ್ಲಿ 18-45 ವರ್ಷದೊಳಗಿನ ವಯಸ್ಕರಲ್ಲಿ ವಿವರಿಸಲಾಗದ ದಿಢೀರ್ ಸಾವುಗಳಿಗೆ ಸಂಬಂಧಿಸಿದ ಅಂಶಗಳು' ಶೀರ್ಷಿಕೆಯಡಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)-ಸಾಂಕ್ರಾಮಿಕ ರೋಗ ವಿಜ್ಞಾನ ರಾಷ್ಟ್ರೀಯ ಸಂಸ್ಥೆಗಳು ಅಧ್ಯಯನ ನಡೆಸಿರುವುದಾಗಿ ಐಸಿಎಂಆರ್ ತಿಳಿಸಿದೆ ಎಂದು ಹೇಳಿದರು.
2021ರ ಅ.1 ಮತ್ತು 2023ರ ಮಾ.31ರ ನಡುವೆ ದಿಢೀರ್ ಸಾವನ್ನಪ್ಪಿದ ಆರೋಗ್ಯವಂತ ವ್ಯಕ್ತಿಗಳ (24 ತಾಸುಗಳ ಒಳಗೆ ಆಸ್ಪತ್ರೆಗೆ ಸೇರಿದವರು ಅಥವಾ ಸಾವಿಗಿಂತ ಮುನ್ನ ಆರೋಗ್ಯವಂತರಾಗಿದ್ದ ವ್ಯಕ್ತಿಗಳು) ಪ್ರಕರಣಗಳ ಕುರಿತ ಅಧ್ಯಯನ ಇದಾಗಿದೆ ಎಂದು ನಡ್ಡಾ ತಿಳಿಸಿದರು.
ಕೋವಿಡ್ ಲಸಿಕೆಯು ದಿಢೀರ್ ಸಾವಿನ ಸಾಧ್ಯತೆಯನ್ನು ಕುಗ್ಗಿಸಿದೆ. ಎರಡು ಡೋಸ್‌ಗಳು ಗಮನಾರ್ಹವಾಗಿ ಸಾವಿನ ಸಾಧ್ಯತೆಯ ಪ್ರಮಾಣವನ್ನು ಕಡಿಮೆ ಮಾಡಿರುವುದನ್ನು ಅಧ್ಯಯನದಲ್ಲಿ ಕಂಡುಬಂದಿದೆ ಎಂದರು.