ಕಾಸರಗೋಡು: ಜಿಲ್ಲಾ ಸಾಮಾಜಿಕ ನ್ಯಾಯ ಇಲಾಖೆ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾ ಮೇಳ 'ಉನರ್ವ್ 2024'ರಲ್ಲಿ ಮಾರ್ಥೋಮಾ ವಿಶೇಷಚೇತನರ ವಿದ್ಯಾಲಯ ಪ್ರಥಮ ಸ್ಥಾನ ಪಡೆದುಕೊಮಡಿತು. ಜಿಲ್ಲೆಯ ವಿವಿಧೆಡೆಯ 108 ಶಾಲೆಗಳಿಂದ 600 ಮಂದಿ ವಿದ್ಯಾರ್ಥಿಗಳು ಕ್ರೀಡಮೇಳದಲ್ಲಿ ಪಾಲ್ಗೊಂಡಿದ್ದರು.
ಕ್ರೀಡೋತ್ಸವದ ಅಂಗವಾಗಿ. ಪರವನಡ್ಕ ಮಾದರಿ ವಸತಿ ಶಾಲೆಯಲ್ಲಿ ನಡೆದ ಕ್ರೀಡಾಮೇಳವನ್ನು ಶಾಸಕ, ವಕೀಲ ಸಿ.ಎಚ್.ಕುಂಜಂಬು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಚೆಮ್ನಾಡು ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾ ಭಾಸ್ಕರನ್, ಪರಿಶಿಷ್ಟ ಜಾತಿ ಇಲಾಖೆಯ ಹಿರಿಯ ಮೇಲ್ವಿಚಾರಕ ಕೆ.ಎಂ.ಪ್ರಸನ್ನ ಉಪಸ್ಥಿತರಿದ್ದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್ ಸ್ವಾಗತಿಸಿದರು. ಸಾಮಾಜಿಕ ನ್ಯಾಯ ಕಛೇರಿ ಹಿರಿಯ ಅಧೀಕ್ಷಕ ಎಂ. ಅಬ್ದುಲ್ಲಾ ವಂದಿಸಿದರು. ಜಿಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘದ ವತಿಯಿಂದ ವಿಶೇಷಚೇತನ ಮಕ್ಕಳ ಕ್ರೀಡಾಕೂಟಕ್ಕೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.