ಕಾಸರಗೋಡು: ಕಾಞಂಗಾಡ್ ಅದಿಞದ ಖಾಸಗಿ ಆಸ್ಪತ್ರೆಯೊಂದರ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಖಂಡಿಸಿ ಕಾಂಗ್ರೆಸ್-ಕೆಎಸ್‍ಯು ಕಾರ್ಯಕರ್ತರು ಆಸ್ಪತ್ರೆ ಎದುರು ನಡೆಸಿದ ಧರಣಿ ಕೋಲಾಹಲಕ್ಕೆ ಕಾರಣವಾಯಿತು. ಆಸ್ಪತ್ರೆ ಎದುರು ಜಮಾಯಿಸಿದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಟಿಪ್ರಹಾರ ನಡೆಸಿದರು. ಇದರಿಂದ ಹಲವರು ಗಾಯಗೊಂಡಿದ್ದಾರೆ. ಆಸ್ಪತ್ರೆಯ ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಚೈತನ್ಯ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ.
ಇದಕ್ಕೂ ಮೊದಲು ಎಸ್‍ಎಫ್‍ಐ ಕಾರ್ಯಕರ್ತರೂ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣ ಖಂಡಿಸಿ ಧರಣಿ ನಡೆಸಿದ್ದು, ಪೊಲೀಸರು ಲಾಟಿಪ್ರಹಾರ ನಡೆಸಿ ಇವರನ್ನು ಚದುರಿಸಿದ್ದರು. ಶನಿವಾರ ರಾತ್ರಿ ಆಸ್ಪತ್ರೆಯ ನಸಿರ್ಂಗ್ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಮಾಹಿತಿ ಹೊರಬೀಳುತ್ತಿದ್ದಂತೆ ನೂರಾರು ಮಂದಿ ಆಸ್ಪತ್ರೆ ಎದುರು ಜಮಾಯಿಸಿ ಘಟನೆಯನ್ನು ಖಂಡಿಸಿದ್ದರು.
ಎಬಿವಿಪಿ ಖಂಡನೆ:
ಘಟನೆ ಖಂಡಿಸಿ ಎಬಿವಿಪಿ ವತಿಯಿಂದ ಕಾಲೇಜು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಎಬಿವಿಪಿ ಜಿಲ್ಲಾ ಕಾರ್ಯದರ್ಶಿ ಶಿವದಾಸ್ ನೇತೃತ್ವದಲ್ಲಿ ಮುತ್ತಿಗೆ ಹಾಕುತ್ತಿದ್ದಂತೆ ಪೊಲೀಸರು ಲಾಟಿ ಪ್ರಹಾರ ನಡೆಸಿ ಚದುರಿಸಿದರು. ಕಾಲೇಜು ವಿದ್ಯಾರ್ಥಿನಿಯರ ಕಾನ್ಸಂಟ್ರೇಶನ್ ಕ್ಯಾಂಪ್‍ನಲ್ಲಿ ಕಾಲೇಜು ಅಧಿಕಾರಿಗಳ ಮಾನಸಿಕ ಹಿಂಸೆಯಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ದೂರಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.