ನವದೆಹಲಿ: ಬಿಕ್ಕಟ್ಟು ಪೀಡಿತ ಸಿರಿಯಾದಿಂದ ಹಂತ ಹಂತವಾಗಿ ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಇದೇ ವೇಳೆ ಸಿರಿಯಾದಲ್ಲಿ ತಾವು ಎದುರಿಸಿದ ಭಯದ ಪರಿಸ್ಥಿತಿಯನ್ನು ನೆನಪಿಸಿಕೊಂಡಿದ್ದಾರೆ. ಜತೆಗೆ, ಭಾರತೀಯ ರಾಯಭಾರ ಕಚೇರಿಯು ನಿರಂತರ ಸಂಪರ್ಕದಲ್ಲಿತ್ತು ಎಂದು ಶ್ಲಾಘಿಸಿದ್ದಾರೆ.
ಶನಿವಾರ ತಡರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೆಲವರು ಸಿರಿಯಾದಲ್ಲಿ ಕಳೆದೊಂದು ವಾರದಿಂದ ತಮಗಾದ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಚಂಡೀಗಢ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಸುನೀಲ್ ದತ್ ಮಾತನಾಡಿ, 'ಸಿರಿಯಾದಲ್ಲಿ ಬಂಡುಕೋರರು ಸಾರ್ವಜನಕರ ಆಸ್ತಿಪಾಸ್ತಿಯನ್ನು ಲೂಟಿ ಮಾಡುವುದರ ಜತೆಗೆ, ಸಿಕ್ಕ ಸಿಕ್ಕಿದ್ದನ್ನೂ ಹೊತ್ತುಕೊಂಡು ಹೋಗುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಸದ್ಯದ ಮಟ್ಟಿಗೆ ಸಿರಿಯಾದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ದಾಳಿಗಳು, ಬೆಂಕಿಯ ದೃಶ್ಯಗಳು ಮತ್ತು ಬಾಂಬ್ ಸ್ಫೋಟದ ಶಬ್ದ ಕೇಳಿ ಬರುತ್ತಿರುತ್ತದೆ' ಎಂದು ಅವರು ತಿಳಿಸಿದ್ದಾರೆ.
'ನಾವು ಸಿರಿಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ನಂತರ ಸ್ವದೇಶಕ್ಕೆ ಮರಳಲು ಬಯಸಿದ ಎಲ್ಲಾ ಭಾರತೀಯರನ್ನು ಸ್ಥಳಾಂತರಿಸಿದ್ದೇವೆ. ಇಲ್ಲಿಯವರೆಗೆ ಸಿರಿಯಾದಿಂದ 77 ಭಾರತೀಯರನ್ನು ಸ್ಥಳಾಂತರಿಸಲಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸಾದ್ ಅವರನ್ನು ಪದಚ್ಯುತಗೊಳಿಸಿದ ನಂತರ ಹೊಸ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಮೊಹಮದ್ ಅಲ್ ಬಶೀರ್ ಅವರನ್ನು ನೇಮಕ ಮಾಡಲಾಗಿದೆ.
ದೇಶವನ್ನು ಮಾರ್ಚ್‌ವರೆಗೂ ಮುನ್ನಡೆಸಲು ಹೋರಾಟಗಾರರ ಗುಂಪು ಬಶೀರ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದೆ. ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿರುವ ಸಿರಿಯಾ ಪ್ರಜೆಗಳು ಸ್ವದೇಶಕ್ಕೆ ಮರಳುವಂತೆ ಮೊಹಮದ್ ಅಲ್ ಬಶೀರ್ ಮನವಿ ಮಾಡಿದ್ದಾರೆ.
ಇಟಲಿಯ ದೈನಿಕ 'ಕೊರಿಯೆರೆ ಡೆಲ್ಲಾ ಸೆರಾ'ಗೆ ಸಂದರ್ಶನ ನೀಡಿರುವ ಅವರು, 'ದೇಶದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ದೇಶ ಹೊಂದಿರುವ ಸಾಲ ಮತ್ತು ಇತರ ಹೊಣೆಗಾರಿಕೆಗಳ ಕುರಿತು ದತ್ತಾಂಶ ಸಂಗ್ರಹಿಸಲಾಗುತ್ತಿದೆ' ಎಂದು ಹೇಳಿದ್ದಾರೆ. ಸಿರಿಯಾದಲ್ಲಿ ಎಲ್ಲ ಜನರು ಮತ್ತು ಸಮುದಾಯದವರ ಹಕ್ಕುಗಳನ್ನು ಖಾತರಿಪಡಿಸುತ್ತೇವೆ ಎಂದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿರಿಯಾ ಮೇಲೆ ಇಸ್ರೇಲ್ ಭಾರಿ ವೈಮಾನಿಕ ದಾಳಿಯನ್ನು ಮುಂದುವರಿಸಿದೆ. ಇದರ ಸೇನಾ ಪಡೆಗಳು ಸಿರಿಯಾ ರಾಜಧಾನಿಯ 25 ಕಿ.ಮೀ. ಹತ್ತಿರದಲ್ಲಿ ದೇಶದೊಳಕ್ಕೆ ಮುನ್ನುಗ್ಗಿವೆ ಎಂದು ವರದಿಯಾಗಿದೆ.
ಡಮಾಸ್ಕಸ್ ಮತ್ತು ಸಮೀಪದ ನಗರಗಳಲ್ಲಿ ಭಾರಿ ವೈಮಾನಿಕ ದಾಳಿಯ ಶಬ್ದ ಸುದ್ದಿಸಂಸ್ಥೆಯ ವರದಿಗಾರರಿಗೆ ಕೇಳಿಸಿದೆ. ನಾಶವಾದ ಕ್ಷಿಪಣಿ ವಾಹಕಗಳು, ಹೆಲಿಕಾಪ್ಟರ್‌ಗಳು ಮತ್ತು ಯುದ್ಧವಿಮಾನಗಳ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.