ನವದೆಹಲಿ: ನೇಮಕಾತಿ ರದ್ದಾಗಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಇಂದು (ಸೋಮವಾರ) ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯತೆ ಸಮಸ್ಯೆಯಿಂದ ಬಳಲುತ್ತಿರುವಂತೆ ನಕಲಿ ದಾಖಲೆಗಳನ್ನು ನೀಡಿ ಮೀಸಲಾತಿಯ ದುರುಪಯೋಗಪಡಿಸಿಕೊಂಡಿರುವ ಆರೋಪ ಪೂಜಾ ಮೇಲಿದೆ.
'ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ' ಎಂದು ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಹೇಳಿದ್ದಾರೆ.
'ಖೇಡ್ಕರ್ ವಿರುದ್ಧ ಪ್ರಬಲವಾದ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಾದರೆ ಸೂಕ್ತ ತನಿಖೆಯ ಅಗತ್ಯವಿದೆ. ಹಾಗಾಗಿ ಪೂಜಾ ಅವರು ತನಿಖೆಗೆ ಸಹಕರಿಸಬೇಕು' ಎಂದೂ ನ್ಯಾಯಮೂರ್ತಿ ಸಿಂಗ್ ತಿಳಿಸಿದ್ದಾರೆ.
ಯುಪಿಎಸ್‌ಸಿ ಪರ ಹಿರಿಯ ವಕೀಲ ನರೇಶ್ ಕೌಶಿಕ್ ಮತ್ತು ವಕೀಲ ವರ್ಧಮಾನ್ ಕೌಶಿಕ್ ವಾದ ಮಂಡಿಸಿದ್ದರು.
ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ಪೂಜಾ ಖೇಡ್ಕರ್ ವಿರುದ್ಧ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ವಿಕಲಚೇತನರ ಹಕ್ಕು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.