ನವದೆಹಲಿ: ನೂರು ವರ್ಷಗಳಷ್ಟು ಹಳೆಯದಾದ ಬಾಯ್ಲರ್ ಕಾಯ್ದೆ-1923ರ ಬದಲಾವಣೆಗೆ ಸಂಬಂಧಿಸಿದಂತೆ ಮಂಡಿಸಿರುವ ಬಾಯ್ಲರ್ ಮಸೂದೆ 2024ಕ್ಕೆ ಬುಧವಾರ ರಾಜ್ಯಸಭೆಯು ಧ್ವನಿಮತದ ಮೂಲಕ ಅಂಗೀಕರಿಸಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು, ಮಸೂದೆಯನ್ನು ಮಂಡಿಸಿದರು.
ಹೊಸ ಮಸೂದೆಯಲ್ಲಿ ಬಾಯ್ಲರ್‌ಗಳ ನಿಯಂತ್ರಣ, ಸ್ಟೀಮ್- ಬಾಯ್ಲರ್‌ಗಳ ಸ್ಫೋಟದಿಂದ ಜನರ ಪ್ರಾಣ ಹಾನಿ ತಡೆಗಟ್ಟುವಿಕೆ ಹಾಗೂ ಆಸ್ತಿಯ ರಕ್ಷಣೆಗೆ ಒತ್ತು ನೀಡಲಾಗಿದೆ. ನೋಂದಣಿಯಲ್ಲಿ ಏಕರೂಪತೆ ತರಲಾಗುತ್ತದೆ. ದೇಶದಲ್ಲಿ ಬಾಯ್ಲರ್‌ಗಳ ಬಳಸುವಿಕೆ ಹಾಗೂ ಸ್ಥಗಿತಕ್ಕೆ ಸಂಬಂಧಿಸಿದ ಹಲವು ಅಂಶಗಳು ಮಸೂದೆಯಲ್ಲಿವೆ ಎಂದು ಸಚಿವರು ಹೇಳಿದರು.
ಬಿಜೆಪಿ ಸದಸ್ಯ ಬ್ರಿಜ್ ಲಾಲ್ ಮಾತನಾಡಿ, ಸರ್ಕಾರವು ಬ್ರಿಟಿಷರ ಕಾಲದಲ್ಲಿ ರೂಪಿಸಿದ್ದ ಕಾನೂನುಗಳನ್ನು ಪರಿಷ್ಕರಿಸಲು ಮುಂದಾಗಿದೆ. ಎಲ್ಲಾ ಕೈಗಾರಿಕೆಗಳಲ್ಲಿ ಬಾಯ್ಲರ್ ಬಳಸಲಾಗುತ್ತದೆ. ವರ್ಷಗಳು ಕಳೆದಂತೆ ಬಾಯ್ಲರ್‌ಗಳು ತುಕ್ಕು ಹಿಡಿದು ಅವಘಡ ಸಂಭವಿಸುತ್ತದೆ. ಇವುಗಳ ವಿನ್ಯಾಸ, ತಯಾರಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮಸೂದೆಯಲ್ಲಿ ಹಲವು ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.