ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡುವ ಸಂದರ್ಭದಲ್ಲಿ ಹೈಕೋರ್ಟ್‌ಗಳು ಸಾಕ್ಷ್ಯಗಳ ಪರಿಶೀಲನೆಗೆ ಹಾಗೂ ಆರೋಪಿಯು ತಪ್ಪಿತಸ್ಥ ಹೌದೋ ಅಲ್ಲವೋ ಎಂಬುದರ ಪರಿಶೀಲನೆಗೆ ಮುಂದಾಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ವಲ್ ಭುಯಾನ್ ಅವರು ಇರುವ ವಿಭಾಗೀಯ ಪೀಠವು, ಕೊಲೆ ಪ್ರಕರಣವೊಂದರ ಸತ್ಯಾಸತ್ಯತೆಯ ವಿಚಾರವಾಗಿ ಬಹಳ ವಿಶಾಲವಾದ ಅರ್ಥವನ್ನು ಧ್ವನಿಸುವ ಹೇಳಿಕೆಗಳನ್ನು ಜಾಮೀನು ನೀಡುವ ಸಂದರ್ಭದಲ್ಲಿ ನೀಡಿದ್ದ ಅಲಹಾಬಾದ್ ಹೈಕೋರ್ಟ್‌ನ ಆದೇಶವೊಂದರನ್ನು ರದ್ದುಪಡಿಸಿದೆ.
ಹೈಕೋರ್ಟ್‌ಗಳು ಜಾಮೀನು ನೀಡುವ ಸಂದರ್ಭದಲ್ಲಿ ಸಾಕ್ಷ್ಯಗಳನ್ನು ಪರಿಶೀಲಿಸಿ ವ್ಯಕ್ತಿಯೊಬ್ಬ ತಪ್ಪಿತಸ್ಥ ಹೌದೋ, ಅಲ್ಲವೋ ಎಂಬುದನ್ನು ತೀರ್ಮಾನಿಸುವಂತಿಲ್ಲ. ಈ ಆದೇಶವನ್ನು ನಾವು ಒಂದು ದಿನವೂ ಉಳಿಸುವುದಿಲ್ಲ. ಇದನ್ನು ನಾವು ಒಂದು ದಿನದಮಟ್ಟಿಗೆ ಚಾಲ್ತಿಯಲ್ಲಿ ಇರಿಸಿದರೂ, ಜಾಮೀನು ನೀಡುವ ಹಂತದಲ್ಲಿ ಆರೋಪಿಯನ್ನು ತಪ್ಪಿತಸ್ಥ ಅಥವಾ ನಿರ್ದೋಷಿ ಎಂದು ಹೇಳಲು ಹೈಕೋರ್ಟ್‌ಗಳಿಗೆ ಮುಕ್ತ ಅವಕಾಶ ಸಿಗುತ್ತದೆ' ಎಂದು ವಿಭಾಗೀಯ ಪೀಠವು ಹೇಳಿದೆ.
ಅಮಿತ್ ಕುಮಾರ್ ಎನ್ನುವವರಿಗೆ ಮೇ 27ರಂದು ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್, ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಅಭಿಪ್ರಾಯ ದಾಖಲಿಸಿತ್ತು ಎಂದು ವರದಿಯಾಗಿದೆ. ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತಾನು ಯಾವುದೇ ಅಭಿಪ್ರಾಯ ದಾಖಲಿಸಿಲ್ಲ ಎಂಬುದನ್ನು ಒತ್ತಿಹೇಳಿರುವ ಸುಪ್ರೀಂ ಕೋರ್ಟ್, ಪ್ರಕರಣವನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ಗೆ ಸೂಚನೆ ನೀಡಿದೆ.