ತಿರುವನಂತಪುರ: ವಿಶ್ವವಿದ್ಯಾನಿಲಯದಲ್ಲಿ ಅಂಗವಿಕಲ ವಿದ್ಯಾರ್ಥಿಗೆ ಎಸ್‍ಎಫ್‍ಐ ಕಾರ್ಯಕರ್ತರು ಥಳಿಸಿದ್ದಾರೆ ಎಂಬ ದೂರಿನ ಕುರಿತು ಪರಿಣಾಮಕಾರಿ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ. ನ್ಯಾಯಮೂರ್ತಿ ಅಲೆಕ್ಸಾಂಡರ್ ಥಾಮಸ್ ಈ ಆದೇಶ ನೀಡಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಮತ್ತು ದೂರಿನಲ್ಲಿನ ಘಟನೆಗಳ ಬಗ್ಗೆ ವರದಿಯಲ್ಲಿ ಸ್ಪಷ್ಟ ಚಿತ್ರಣ ನೀಡಬೇಕು ಎಂದು ಆಯೋಗ ಮನವಿ ಮಾಡಿದೆ. ಕಾಲೇಜು ಶಿಕ್ಷಣ ನಿರ್ದೇಶಕರು ವಿದ್ಯಾರ್ಥಿಯ ಆರೋಪಗಳ ಬಗ್ಗೆ ವಸ್ತುನಿಷ್ಠ ವಿಚಾರಣೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಕಾಲೇಜು ಶಿಕ್ಷಣ ನಿರ್ದೇಶಕರು ನೇಮಿಸಿರುವ ಇಬ್ಬರು ಹಿರಿಯ ಅಧಿಕಾರಿಗಳು ಜನವರಿ 14ರಂದು ಪ್ರಕರಣವನ್ನು ಪರಿಗಣಿಸಿದಾಗ ಆಯೋಗದ ಕಚೇರಿಗೆ ಖುದ್ದಾಗಿ ಹಾಜರಾಗುವಂತೆಯೂ ಸೂಚಿಸಲಾಗಿದೆ.
ಎಸ್‍ಎಫ್‍ಐ ಚಟುವಟಿಕೆಯಲ್ಲಿ ಭಾಗವಹಿಸದ ಕಾರಣ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂಬುದು ದೂರು.