ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಸ್ಪರ್ಧಿಸುತ್ತಿರುವ ನವದೆಹಲಿಯ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಹಿಳೆಯರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ದೆಹಲಿಯ ಮುಖ್ಯಮಂತ್ರಿ ಅತಿಶಿ ಇಂದು (ಬುಧವಾರ) ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿರುವ ಅತಿಶಿ, 'ವಿಂಡ್ಸನ್ ಪ್ಲೇಸ್‌ನಲ್ಲಿರುವ ಬಿಜೆಪಿಯ ಮಾಜಿ ಸಂಸದ ಪರ್ವೇಶ್ ವರ್ಮಾ ಅವರ ನಿವಾಸದಲ್ಲಿ ಸ್ಲಂ ಕ್ಲಸ್ಟರ್‌ಗಳ ಮಹಿಳೆಯರಿಗೆ ತಲಾ ₹1,110 ಹಂಚಿಕೆ ಮಾಡಲಾಗಿದೆ' ಎಂದು ಹೇಳಿದ್ದಾರೆ.
ಕೋಟ್ಯಂತರ ರೂಪಾಯಿಗಳನ್ನು ಇರಿಸಲಾಗಿರುವ ಬಂಗಲೆಯ ಮೇಲೆ ದಾಳಿ ನಡೆಸುವಂತೆಯೂ ಅತಿಶಿ, ದೆಹಲಿ ಪೊಲೀಸ್, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ವಿನಂತಿಸಿದ್ದಾರೆ.
ವರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿರುವ ಅವರು, ಚುನಾವಣಾ ಆಯೋಗಕ್ಕೆ ಎಎಪಿ ಔಪಚಾರಿಕ ದೂರನ್ನು ಸಲ್ಲಿಸಲಿದೆ ಎಂದು ಹೇಳಿದ್ದಾರೆ.
'ನನ್ನ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣ ಹಂಚಲಾಗಿದೆ' ಎಂದು ಅರವಿಂದ ಕೇಜ್ರಿವಾಲ್ ಸಹ ಆರೋಪಿಸಿದ್ದಾರೆ.
ಆದರೆ ಎಎಪಿ ಮಾಡಿರುವ ಆರೋಪಗಳನ್ನು ನಿರಾಕರಿಸಿರುವ ವರ್ಮಾ, 'ನನ್ನ ತಂದೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹೀಬ್ ಸಿಂಗ್ ವರ್ವಾ ಅವರು ಸ್ಥಾಪಿಸಿದ್ದ ಎನ್‌ಜಿಒ 'ರಾಷ್ಟ್ರೀಯ ಸ್ವಾಭಿಮಾನ್' ಅಭಿಯಾನದ ಭಾಗವಾಗಿ ಹಣ ನೀಡಲಾಗಿದೆ' ಎಂದು ಹೇಳಿದ್ದಾರೆ.
'11 ವರ್ಷಗಳಿಂದ ಮಹಿಳೆಯರು ತೊಂದರೆಗೀಡಾಗಿದ್ದಾರೆ. ಆದರೆ ಅವರ ಬಗ್ಗೆ ಕೇಜ್ರಿವಾಲ್ ಚಿಂತಿತರಾಗಿಲ್ಲ. ಹಾಗಾಗಿ ಮಹಿಳೆಯರಿಗೆ ತಿಂಗಳಿಗೆ ₹1,110 ನೀಡಲು ನಿರ್ಧರಿಸಿದ್ದೇನೆ. ಕೇಜ್ರಿವಾಲ್ ಅವರಂತೆ ಮದ್ಯವನ್ನು ವಿತರಿಸಿಲ್ಲ. ನನ್ನ ಕ್ಷೇತ್ರದ ಮಹಿಳೆಯರಿಗೆ ಸಹಾಯ ಮಾಡುವುದರಲ್ಲಿ ನನಗೆ ಸಂತಸವಿದೆ' ಎಂದು ಹೇಳಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಮುಂದಿನ ವರ್ಷ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.