ಲಾಹೋರ್: ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಂತಾಪ ಸಲ್ಲಿಸದಿರುವ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಮನಮೋಹನ ಸಿಂಗ್ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಛಕ್ವಾಲ್ ಜಿಲ್ಲೆಯ ಗಹ್ ಗ್ರಾಮದಲ್ಲಿ ಜನಿಸಿದ್ದರು.
2004ರಿಂದ 2014ರ ತನಕ ಪ್ರಧಾನಿಯಾಗಿದ್ದರು. ಡಿ.26ರಂದು ನವದೆಹಲಿಯಲ್ಲಿ ಕೊನೆಯುಸಿರೆಳೆದಿದ್ದರು.
ವಿಶ್ವದಾದ್ಯಂತ ಹಲವು ಗಣ್ಯರು ಮನಮೋಹನ ಅವರ ನಿಧನಕ್ಕೆ ಸಂತಾಪ ಸಲ್ಲಿಸಿದ್ದರು. ಆದರೆ, ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಅವರ ಸಹೋದರ, ಮೂರು ಬಾರಿ ಪ‍್ರಧಾನಿಯಾಗಿರುವ ನವಾಜ್ ಷರೀಫ್ ಇದುವರೆಗೂ ಸಂತಾಪ ವ್ಯಕ್ತಪಡಿಸಿಲ್ಲ.
ಈ ಬೆಳವಣಿಗೆ ಮಧ್ಯೆಯೇ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಧರ್ ಅವರು ಸಂತಾಪ ಸಲ್ಲಿಸಿದ್ದರು.
ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ಶುಕ್ರವಾರ ಮೃತಪಟ್ಟ ಬಳಿಕ, ಶೆಹಬಾಜ್ ಷರೀಫ್ ಹಾಗೂ ಇತರೆ ಸಚಿವರು 'ಎಕ್ಸ್' ಮೂಲಕ ತಕ್ಷಣವೇ ಸಂತಾಪ ಸಲ್ಲಿಸಿದ್ದರು.
'ಶೆಹಬಾಜ್ ಷರೀಫ್ ಹಾಗೂ ನವಾಜ್ ಷರೀಫ್ ಅವರು ಇನ್ನೂ ಕೂಡ ಸಿಂಗ್ ನಿಧನಕ್ಕೆ ಸಾರ್ವಜನಿಕವಾಗಿ ಸಂತಾಪ ಸಲ್ಲಿಸಿಲ್ಲ. ನಿಜಕ್ಕೂ ದಿಗ್ಭ್ರಮೆಗೊಳಿಸುವ ವಿಚಾರ. ಇಬ್ಬರೂ ಸಮಕಾಲೀನರು. ಆರ್ಥಿಕ ವಿಚಾರ ಹಾಗೂ ಭಾರತ-ಪಾಕಿಸ್ತಾನ ನಡುವೆ ಸಂಬಂಧ ಸುಧಾರಿಸುವ ವಿಚಾರದಲ್ಲಿ ಸಮಾನ ನಿಲುವುಗಳನ್ನು ಹೊಂದಿದ್ದರು' ವಿಲ್ಸನ್ ಸೆಂಟರ್ ಸೌತ್ ಏಷ್ಯಾ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಮೈಕೆಲ್ ಕುಗೆಲ್‌ಮನ್ 'ಎಕ್ಸ್' ಮೂಲಕ ತಿಳಿಸಿದ್ದಾರೆ.