ಲಖನೌ: 'ಮಿರಾಕಲ್ ಆಯಿಲ್' ಬಳಸಿದರೆ ಬೋಳು ತಲೆಯಲ್ಲಿ ಕೂದಲು ಬೆಳೆಯುತ್ತದೆ ಎನ್ನುವ ಜಾಹೀರಾತು ನಂಬಿ ಆಯಿಲ್ ಕೊಳ್ಳಲು ನೂರಾರು ಜನ ಸರತಿ ಸಾಲಿನಲ್ಲಿ ನಿಂತ ಕಾರಣ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಹಲವು ಸುದ್ದಿ ಪತ್ರಿಕೆಗಳಲ್ಲಿ ಮಿರಾಕಲ್ ಆಯಿಲ್ ಕುರಿತಾದ ಜಾಹೀರಾತು ಪ್ರಕಟವಾಗಿತ್ತು. ಜಾಹೀರಾತಿನಲ್ಲಿ ಮಿರಾಕಲ್ ಆಯಿಲ್ ಖರೀದಿಸಲು ಭಾನುವಾರ ಮತ್ತು ಸೋಮವಾರ ನಗರದ ಲಿಸಾದಿ ಗೇಟ್ ಬಳಿ ಬ್ಯಾಂಕೆಟ್ ಹಾಲ್ ಬಳಿ ಬನ್ನಿರಿ ಎಂದು ಪ್ರಕಟಿಸಲಾಗಿತ್ತು.
ದೆಹಲಿಯಿಂದ ಬಂದಿದ್ದ ಇಬ್ಬರು ವ್ಯಕ್ತಿಗಳು, ಬೋಳು ತಲೆ ಇರುವ ವ್ಯಕ್ತಿಗಳ ತಲೆಗೆ ಎಣ್ಣೆ ಹಚ್ಚಿ, ಬಾಟಲಿಗೆ ₹300ರಂತೆ ನೀಡುತ್ತಿದ್ದರು. ಕೆಲವೇ ಹೊತ್ತಿನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಎಣ್ಣೆಯ ಬಾಟಲಿಯನ್ನು ಖರೀದಿಸಲು ಮುಗಿಬಿದ್ದಿದ್ದರು. ಪರಿಣಾಮ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಆಯೋಜಕರು ಮಿರಾಕಲ್ ಆಯಿಲ್ ಖರೀದಿಸಲು ಬಂದ ಜನರಿಗೆ ಟೋಕನ್ ವ್ಯವಸ್ಥೆ ಮಾಡಿದ್ದರು. ಅಲ್ಲದೆ ಆಯೋಜಕರು ಕೂದಲಿಲ್ಲದ ಬೋಳು ತಲೆಗೆ ಮಾತ್ರ ಎಣ್ಣೆ ಹಚ್ಚಬೇಕು ಎಂದು ಹೇಳಿದ್ದಕ್ಕೆ ಭಾಗಶಃ ತಲೆಕೂದಲು ಉದುರಿದವರು ಸಂಪೂರ್ಣವಾಗಿ ಬೋಳು ಮಾಡಿಕೊಂಡು ಬಂದಿದ್ದರು.
'ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ, ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ' ಎಂದು ಸ್ಥಳೀಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.