HEALTH TIPS

ಶಿರೋಮಣಿ ಅಕಾಲಿ ದಳದ ನಾಯಕ ಸುಖಬೀರ್ ಸಿಂಗ್ ಬಾದಲ್‌ ಹತ್ಯೆಗೆ ಯತ್ನ

ಚಂಡೀಗಢ: ಧಾರ್ಮಿಕ ಶಿಕ್ಷೆಯಡಿ 'ಸೇವಾದಾರ'ರಾಗಿ ಕೆಲಸ ನಿರ್ವಹಿಸಲು ಸ್ವರ್ಣಮಂದಿರಕ್ಕೆ ಬಂದಿದ್ದ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ನಾಯಕ, ಸುಖ್‌ಬಿರ್ ಸಿಂಗ್ ಬಾದಲ್‌ ಅವರ ಮೇಲೆ ಗುಂಡುಹಾರಿಸಿ ಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಸ್ಥಳದಲ್ಲಿ ಸಾಮಾನ್ಯ ದಿರಿಸಿನಲ್ಲಿದ್ದ ಪೊಲೀಸರು ಹತ್ಯೆ ಯತ್ನವನ್ನು ವಿಫಲಗೊಳಿಸಿದ್ದು, ಹತ್ಯೆಗೆ ಯತ್ನಿಸಿದ ಮಾಜಿ ಖಾಲಿಸ್ತಾನಿ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು 68 ವರ್ಷದ ನಾರಾಯಣ್‌ ಸಿಂಗ್ ಚೌರಾ ಎಂದು ಗುರುತಿಸಲಾಗಿದೆ. ಈತ ಮಂಗಳವಾರವೂ ಸ್ವರ್ಣಮಂದಿರ ಬಳಿ ಕಾಣಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳ ಕ್ಯಾಮೆರಾಗಳಲ್ಲಿ ಹಲ್ಲೆ ಯತ್ನದ ದೃಶ್ಯಗಳು ಸೆರೆಯಾಗಿವೆ. ಪಂಜಾಬ್‌ನಲ್ಲಿ 2007ರಿಂದ 2017ರವರೆಗೆ ಎಸ್‌ಎಡಿ ಪಕ್ಷದ ಅಧಿಕಾರ ಅವಧಿಯಲ್ಲಿ ಆಗಿರುವ 'ತಪ್ಪುಗಳಿಗೆ' ಪ್ರಾಯಶ್ಚಿತ್ತವಾಗಿ ಬಾದಲ್ ಅವರು ಧಾರ್ಮಿಕ ಶಿಕ್ಷೆಗೆ ಗುರಿಯಾಗಿದ್ದಾರೆ.

ಬಾದಲ್ ಅವರ ಬಳಿಗೆ ನಿಧಾನಗತಿಯಲ್ಲಿ ಸಾಗುವ ಹಲ್ಲೆಕೋರ, ಜೇಬಿನಿಂದ ಗನ್‌ ತೆಗೆದು ಹಲ್ಲೆಗೆ ಯತ್ನಿಸುವುದು ವಿಡಿಯೊದಲ್ಲಿ ದಾಖಲಾಗಿದೆ. ಸಮೀಪದಲ್ಲೇ ಇದ್ದ ಪೊಲೀಸರು ಜಾಗೃತರಾಗಿದ್ದು, ಹಲ್ಲೆಕೋರನ ಮೇಲೆ ಬಲಪ್ರಯೋಗ ಮಾಡಿದ್ದಾರೆ. ಈ ಗೊಂದದಲ್ಲಿಯೇ ಸಿಡಿದಿರುವ ಗುಂಡು, ಸ್ವರ್ಣಮಂದಿರ ಪ್ರವೇಶದ್ವಾರದ ಗೋಡೆಗೆ ತಾಕಿದೆ. ಬಾದಲ್‌ ಅವರು ಅಪಾಯವಿಲ್ಲದೆ ಪಾರಾಗಿದ್ದಾರೆ.

ಬಾದಲ್‌ ಅವರಿಗೆ ಝಡ್‌ ಪ್ಲಸ್‌ ದರ್ಜೆಯ ಭದ್ರತೆ ನೀಡಲಾಗಿದೆ. ಹಲ್ಲೆ ಕೃತ್ಯದ ಹಿಂದೆಯೇ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಸದಸ್ಯರು ಸ್ಥಳಕ್ಕೆ ಧಾವಿಸಿದರು.

ನಾರಾಯಣ್ ಸಿಂಗ್ ಚೌರಾ ಡೇರಾ ಬಾಬಾ ನಾನಕ್‌ ನಿವಾಸಿಯಾಗಿದ್ದು, ಮಾಜಿ ಉಗ್ರನಾಗಿದ್ದಾನೆ. ಮಂಗಳವಾರವು ಆತ ಕಾಣಿಸಿಕೊಂಡಿದ್ದ. ಪೊಲೀಸರು ಆತನ ಮೇಲೆ ಕಣ್ಗಾವಲು ಇಟ್ಟಿದ್ದರು ಎಂದು ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ ಹರ್ಪಲ್ ಸಿಂಗ್ ತಿಳಿಸಿದರು.

ಈತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಕೂಡಾ (ಯುಎಪಿಎ) ಪ್ರಕರಣವಿದೆ. 2004ರಲ್ಲಿ ನಡೆದಿದ್ದ ಬುರೈಲ್ ಜೈಲ್ ಪ್ರಕರಣದಲ್ಲೂ ಭಾಗಿಯಾಗಿದ್ದ ಈತ ಉಗ್ರರಾದ ಜಗ್‌ತಾರ್ ಸಿಂಗ್, ಪರಂಜಿತ್ ಸಿಂಗ್ ಭೇವೊರಾ ಮತ್ತು ಇತರ ಇಬ್ಬರು ಜೈಲಿನಿಂದ ಪಾರಾಗಲು ನೆರವಾಗಿದ್ದ ಎಂದು ವಿಶೇಷ ಡಿಜಿಪಿ ಅರ್ಪಿತ್ ಶುಕ್ಲಾ ತಿಳಿಸಿದರು.

'ಚೌರಾನನ್ನು ಬಂಧಿಸಿ, ಎಫ್‌ಐ‌ಆರ್ ದಾಖಲಿಸಲಾಗಿದೆ. ದಾಳಿಗೆ ಬಳಸಿದ್ದ ಮಾರಕಾಸ್ತ್ರವನ್ನು ವಶಕ್ಕೆ ಪಡೆಯಲಾಗಿದೆ' ಎಂದು ಅಮೃತಸರ ಪೊಲೀಸ್‌ ಕಮಿಷನರ್ ಗುರುಪ್ರೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ.

ಸ್ವರ್ಣಮಂದಿರಕ್ಕೆ ಚೌರಾ ಒಬ್ಬನೇ ಬಂದಿದ್ದ. ದಾಳಿಗೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆದಿದೆ ಎಂದು ತಿಳಿಸಿದರು. 'ಸ್ವರ್ಣಮಂದಿರ ಬಳಿ ಅಗತ್ಯ ಪ್ರಮಾಣದ ಭದ್ರತೆ ಇತ್ತು. ಧರ್ಮ ಸೂಕ್ಷ್ಮತೆಯ ಕಾರಣದಿಂದಾಗಿ ಎಲ್ಲರನ್ನೂ ಶೋಧಿಸಲಾಗದು' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗುಂಡಿನ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಸಂಸದೆಯೂ ಆಗಿರುವ ಬಾದಲ್ ಪತ್ನಿ ಹರ್‌ಸಿಮ್ರತ್ ಕೌರ್ ಅವರು ಸ್ಥಳಕ್ಕೆ ಧಾವಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries