ಬೆಂಗಳೂರು: 'ಕಳೆದ ಜುಲೈನಲ್ಲಿ ವಯನಾಡ್‌ನಲ್ಲಿ ಸಂಭವಿಸಿದ ಭೂ ಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ 100 ಮನೆ ನಿರ್ಮಿಸಿ ಕೊಡುವ ಭರವಸೆಯಂತೆ, ಮನೆ ನಿರ್ಮಿಸಲು ಅಗತ್ಯವಾದ ಭೂಮಿ ಖರೀದಿಯ ವೆಚ್ಚವನ್ನು ಭರಿಸಲು ಕೂಡಾ ಸಿದ್ಧ' ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಡಿ. 9ರಂದು ಈ ಪತ್ರ ಬರೆದಿರುವ ಸಿದ್ದರಾಮಯ್ಯ, ಭೂ ಕುಸಿತದಿಂದಾಗಿ ಬದುಕಿನ ನೆಲೆ ಕಳೆದುಕೊಂಡ ಜನರಿಗೆ ಹೊಸ ಬದುಕು ಕಟ್ಟಿಕೊಡುವ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ಕಡೆಯಿಂದ 100 ಮನೆ ಕಟ್ಟಿಕೊಡುವ ಭರವಸೆಗೆ ಬದ್ಧವಾಗಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಈ ತೀರ್ಮಾನವನ್ನು ಕೇರಳದ ಮುಖ್ಯ ಕಾರ್ಯದರ್ಶಿಗೆ ಅಧಿಕೃತವಾಗಿ ತಿಳಿಸಿದ್ದರೂ ಯೋಜನೆ ಅನುಷ್ಠಾನ ಸಂಬಂಧ ಮಾರ್ಗಸೂಚಿ, ನಿರ್ದೇಶನಗಳ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಾರದಿರುವ ಬಗ್ಗೆ ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯನ್ನು ಸುಲಭಗೊಳಿಸಲು, ಸಂತ್ರಸ್ತರನ್ನು ಸ್ಥಳಾಂತರಿಸಿ, ತ್ವರಿತವಾಗಿ ಪರಿಹಾರ ಒದಗಿಸಲು ಹೊಸತಾಗಿ ಮನೆ ಕಟ್ಟಿಕೊಡಲು ಅಗತ್ಯವಾದ ಭೂಮಿ ಖರೀದಿಗೂ ಕರ್ನಾಟಕ ಸಿದ್ಧವಿದೆ. ಈ ಪ್ರಯತ್ನಕ್ಕೆ ತಮ್ಮ ಸಹಕಾರ ಮತ್ತು ಸಹಯೋಗ ಅಗತ್ಯವಿದೆ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.