ನವದೆಹಲಿ: ಬಾಹ್ಯಾಕಾಶದಲ್ಲಿ ಬೀಜಗಳು ಮೊಳಕೆಯೊಡೆಯುವುದು ಮತ್ತು ಅಲ್ಲಿ ಸಂಗ್ರಹವಾಗಿರುವ ಉಪಗ್ರಹಗಳ ಅವಶೇಷಗಳನ್ನು 'ರೋಬಾಟಿಕ್ ತೋಳು' ಬಳಸಿ ತೆರವುಗೊಳಿಸುವ ಪ್ರಯೋಗವನ್ನು ಕೈಗೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಂದಾಗಿದೆ.
ಇಸ್ರೊ ತನ್ನ ಮುಂದಿನ ಉಡಾವಣೆಗೆ ಬಳಸುವ 'ಪಿಒಇಎಂ-4' ರಾಕೆಟ್ ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ.
'ಪಿಎಸ್‌ಎಲ್‌ವಿ-60' ಮಿಷನ್ ಈ ತಿಂಗಳ ಕೊನೆಯಲ್ಲಿ ನಡೆಯಲಿದ್ದು, 'ಚೇಸರ್' ಮತ್ತು 'ಟಾರ್ಗೆಟ್' ಹೆಸರಿನ ಎರಡು ಉಪಗ್ರಹಗಳನ್ನು 'ಪಿಒಇಎಂ-4' ರಾಕೆಟ್ ಕಕ್ಷೆಗೆ ಸೇರಿಸಲಿದೆ.
ಈ ಉಪಗ್ರಹಗಳನ್ನು ನಿರ್ದಿಷ್ಟ ಕಕ್ಷೆಯಲ್ಲಿ ಸೇರಿಸಿದ ನಂತರ, ಪಿಎಸ್‌ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟ್ ಮಾಡ್ಯೂಲ್ (ಪಿಒಇಎಂ) ರಾಕೆಟ್ ನೆರವಿನಿಂದ ವಿವಿಧ ರೀತಿಯ 24 ಪ್ರಯೋಗಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಲ್ಲಿ 14 ಪ್ರಯೋಗಗಳು ಇಸ್ರೊದ ಪ್ರಯೋಗಾಲಯಗಳಿಂದ ಮತ್ತು ಇತರ 10 ಪ್ರಯೋಗಗಳು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ನವೋದ್ಯಮಗಳಿಂದ ನಡೆಯಲಿವೆ.
ಮುಚ್ಚಿದ ಪೆಟ್ಟಿಗೆಯ ಪರಿಸರದಲ್ಲಿ ಎಂಟು ಅಲಸಂದೆ ಕಾಳುಗಳನ್ನು ಮೊಳಕೆಯೊಡೆಸಿ, ಎರಡು ಎಲೆಗಳು ಬರುವ ಹಂತದವರೆಗೆ ಸಸಿಯನ್ನು ಬೆಳೆಸಲು ಇಸ್ರೊ ಯೋಜಿಸಿದೆ. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು (ವಿಎಸ್‌ಎಸ್‌ಸಿ) ಅಭಿವೃದ್ಧಿಪಡಿಸಿರುವ ಕಾಂಪ್ಯಾಕ್ಟ್ ರಿಸರ್ಚ್ ಮಾಡ್ಯೂಲ್ ಫಾರ್ ಆರ್ಬಿಟಲ್ ಪ್ಲಾಂಟ್ ಸ್ಟಡೀಸ್ (ಸಿಆರ್‌ಒಪಿಎಸ್) ಭಾಗವಾಗಿ ಈ ಪ್ರಯೋಗ ನಡೆಯಲಿದೆ.
ಮುಂಬೈನ ಅಮಿಟಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಅಮಿಟಿ ಪ್ಲಾಂಟ್ ಎಕ್ಸ್‌ಪರಿಮೆಂಟಲ್ ಮಾಡ್ಯೂಲ್ ಇನ್ ಸ್ಪೇಸ್ (ಎಪಿಇಎಂಎಸ್), ಬಾಹ್ಯಾಕಾಶದ ಮೈಕ್ರೊಗ್ರ್ಯಾವಿಟಿ ಪರಿಸರವು ಪಾಲಕ್ ಸಸಿಗಳ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ನಡೆಸಲಿದೆ.
ಈ ಎರಡೂ ಪ್ರಯೋಗಗಳು (ಬಾಹ್ಯಾಕಾಶದಲ್ಲಿ ಪಿಒಇಎಂ-4 ಮತ್ತು ಭೂಮಿಯಲ್ಲಿ ಅಮಿಟಿ ವಿ.ವಿ) ಏಕಕಾಲದಲ್ಲಿ ನಡೆಯಲಿವೆ. ಸಸ್ಯಗಳು ಗುರುತ್ವಾಕರ್ಷಣೆ ಮತ್ತು ಬೆಳಕಿನ ದಿಕ್ಕನ್ನು ಹೇಗೆ ಗ್ರಹಿಸುತ್ತವೆ ಎಂಬುದರ ಕುರಿತ ಒಳನೋಟವನ್ನು ಈ ಪ್ರಯೋಗದ ಫಲಿತಾಂಶವು ನೀಡಲಿದೆ.
ವಿಎಸ್‌ಎಸ್‌ಸಿ ಅಭಿದ್ಧಿಪಡಿಸಿರುವ 'ಡೆಬ್ರಿಸ್ ಕ್ಯಾಪ್ಚರ್ ರೋಬಾಟಿಕ್ ಮ್ಯಾನಿಪುಲೇಟರ್' ಬಾಹ್ಯಾಕಾಶದಲ್ಲಿರುವ ಅವಶೇಷಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.