HEALTH TIPS

'ಅಪ್ರಮಾಣಿಕ'ರಿಂದ ಸಂವಿಧಾನಕ್ಕೆ ಅಪಚಾರ; ಕಾಂಗ್ರೆಸ್‌ ವಿರುದ್ಧ ನಡ್ಡಾ ವಾಗ್ದಾಳಿ

ನವದೆಹಲಿ: 'ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿರುವ ಸಂವಿಧಾನ ರಚನಾಸಭೆಗೆ ಇಡೀ ದೇಶವೇ ಕೃತಜ್ಞವಾಗಿದೆ. ಆದರೆ, ಕೆಲ 'ಅಪ್ರಮಾಣಿಕರು' ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ರಾಜ್ಯಸಭೆಯಲ್ಲಿ ಬಿಜೆಪಿಯ ಸದನ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡಾ ಮಂಗಳವಾರ ಹೇಳಿದ್ದಾರೆ.

ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಅನುಷ್ಠಾನಗೊಳಿಸುವವರು ಉತ್ತಮರಾಗಿರದಿದ್ದಾಗ, ಒಳ್ಳೆಯ ಸಂವಿಧಾನವೊಂದು ಕೂಡ ಕೆಟ್ಟದಾಗಿದೆ ಎನಿಸಿಬಿಡುತ್ತದೆ' ಎಂಬ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೇಳಿಕೆ ಉಲ್ಲೇಖಿಸಿದರು.

ಸಂವಿಧಾನ ಪ್ರಸ್ತಾವನೆಗೆ ತಿದ್ದುಪಡಿ, ತುರ್ತು ಪರಿಸ್ಥಿತಿ ಹೇರಿಕೆ ಹಾಗೂ 370ನೇ ವಿಧಿ ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ಟೀಕೆ ಹರಿತಗೊಳಿಸಿದರು.

'ಅಂಬೇಡ್ಕರ್‌ 370ನೇ ವಿಧಿಯಲ್ಲಿನ ಅವಕಾಶವನ್ನು ವಿರೋಧಿಸಿದ್ದರು. ಸಂಸತ್‌ನಲ್ಲಿ ಚರ್ಚೆ ಇಲ್ಲದೆಯೇ, ರಾಷ್ಟ್ರಪತಿಗಳ ಅಂಕಿತ ಪಡೆಯುವ ಮೂಲಕ 35ಎ ವಿಧಿಯನ್ನು ಜಾರಿಗೊಳಿಸಲಾಗಿತ್ತು' ಎಂದರು.

'ಮುಂದಿನ ವರ್ಷ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ 50 ವರ್ಷ ತುಂಬುತ್ತವೆ. ಅದರ ಅಂಗವಾಗಿ ನಾವು 'ಪ್ರಜಾಪ್ರಭುತ್ವ ವಿರೋಧಿ ದಿನ' ಹಮ್ಮಿಕೊಳ್ಳುತ್ತೇವೆ. ಆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಪಕ್ಷಕ್ಕೂ ಆಹ್ವಾನ ನೀಡುತ್ತೇವೆ' ಎಂದು ನಡ್ಡಾ ಹೇಳಿದರು.

'ಮಣಿಪುರದಲ್ಲಿ ಜನರ ಸಾಂವಿಧಾನಿಕ ಹಕ್ಕುಗಳನ್ನೇ ಕಿತ್ತುಕೊಳ್ಳಲಾಗಿದೆ. ಆದರೆ, ಸಂವಿಧಾನ ಕುರಿತ ಚರ್ಚೆಯ ವೇಳೆ ಬಿಜೆಪಿ ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸದೇ ಇದ್ದದ್ದು ಖಂಡನೀಯ' ಎಂದು ಪ್ರತಿಪಕ್ಷಗಳಾದ ಟಿಎಂಸಿ ಹಾಗೂ ಸಿಪಿಎಂ ಆರೋಪಿಸಿದವು. 'ಮಣಿಪುರ ಜನರ ಸಾಂವಿಧಾನಿಕ ಹಕ್ಕುಗಳನ್ನು ದಮನ ಮಾಡಿದ್ದಕ್ಕಾಗಿ ಈಶಾನ್ಯ ಭಾಗದ ಎಲ್ಲ ಆಡಳಿತ ಪಕ್ಷಗಳ ಸಂಸದರು ರಾಜೀನಾಮೆ ನೀಡಬೇಕು' ಎಂದು ಟಿಎಂಸಿ ಸಂಸದೆ ಸುಷ್ಮಿತಾ ದೇವ್‌ ಆಗ್ರಹಿಸಿದರು. ಈ ಮಾತಿಗೆ ದನಿಗೂಡಿಸಿದ ಸಿಪಿಎಂನ ಜಾನ್‌ ಬ್ರಿಟ್ಟಾಸ್‌,'ಮಣಿಪುರ ವಿಚಾರವಾಗಿ ನರೇಂದ್ರ ಮೋದಿ ಅವರು ಒಬ್ಬ ಪ್ರಧಾನಿಯಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು' ಎಂದು ಆಗ್ರಹಿಸಿದರು.'ಮಣಿಪುರ ವಿದ್ಯಮಾನ ಪ್ರಸ್ತಾಪಿಸದ ಬಿಜೆಪಿ'

ಮೀಸಲಾತಿ ಜಟಾಪಟಿ

ಸಂವಿಧಾನ ಕುರಿತು ಚರ್ಚೆ ವೇಳೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಜಟಾಪಟಿ ನಡೆಯಿತು.

'ಕಾಂಗ್ರೆಸ್‌ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಯತ್ನಿಸುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ ನಡೆಸಿದ ಇಂತಹ ಪ್ರಯತ್ನವನ್ನು ಹೈಕೋರ್ಟ್‌ ರದ್ದು ಮಾಡಿದೆ' ಎಂದು ಬಿಜೆಪಿಯ ಜೆ.ಪಿ.ನಡ್ಡಾ ಹೇಳಿದರು.

'ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್‌ನವರು ಸಂವಿಧಾನವನ್ನು ತಪ್ಪಾಗಿ ಅರ್ಥೈಸಲು ಯತ್ನಿಸುತ್ತಿದ್ದಾರೆ ಎಂಬುದು ದೇಶಕ್ಕೆ ತಿಳಿಯಬೇಕು' ಎಂದೂ ಕುಟುಕಿದರು.

ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್‌ನ ಜೈರಾಮ್‌ ರಮೇಶ್ ಗುಜರಾತ್‌ ಸರ್ಕಾರ ನೀಡಿರುವ ಮೀಸಲಾತಿಯನ್ನು ಪ್ರಸ್ತಾಪಿಸಿದರು. ಅಗ ನಡ್ಡಾ ಅವರ ನೆರವಿಗೆ ಧಾವಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌'ಜೈರಾಮ್‌ ರಮೇಶ್‌ ಹೇಳುತ್ತಿರುವುದು ತಪ್ಪು. ಗುಜರಾತ್‌ನಲ್ಲಿ ಆರ್ಥಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ' ಎಂದರು.

ಈ ಹಿಂದಿನ ಕಾಂಗ್ರೆಸ್‌ ಸರ್ಕಾರವಿದ್ದಾಗ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಹೊರಡಿಸಿದ್ದು ಎನ್ನಲಾದ ಸುತ್ತೋಲೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪಿಸಿದರು.

'ಈ ಸುತ್ತೋಲೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಹೇಳಲಾಗಿದೆ. ಗುಜರಾತ್‌ ಸರ್ಕಾರ ನೀಡಿರುವ ಮೀಸಲಾತಿ ಮತ್ತು ಡಿಒಪಿಟಿಯ ಸುತ್ತೋಲೆಯಲ್ಲಿನ ವಿಷಯ ಬೇರೆಯೇ ಇವೆ. ಇದನ್ನು ತಪ್ಪಾಗಿ ತಿಳಿದುಕೊಂಡಿರುವ ರಮೇಶ್‌ ಸದನದ ದಾರಿ ತಪ್ಪಿಸುತ್ತಿದ್ದಾರೆ' ಎಂದರು.

ನಿರ್ಮಲಾ ಸೀತಾರಾಮನ್‌ ಮಾತಿಗೆ ಪ್ರತಿಕ್ರಿಯಿಸಿದ ಜೈರಾಮ್‌ ರಮೇಶ್'ಕಾಂಗ್ರೆಸ್‌ನವರು ಧರ್ಮ ಆಧಾರಿತ ಮೀಸಲಾತಿ ಕುರಿತು ಎಂದಿಗೂ ಮಾತನಾಡಿಲ್ಲ' ಎಂದು ತಿರುಗೇಟು ನೀಡಿದರು.

'ಕರ್ನಾಟಕದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆಯೇ ಹೊರತು ಧರ್ಮಾಧಾರಿತವಾಗಿ ಅಲ್ಲ' ಎಂದೂ ರಮೇಶ್‌ ಹೇಳಿದರು.

'ಜೈರಾಮ್‌ ರಮೇಶ್‌ ಅವರು ಎಷ್ಟೇ ಸ್ಪಷ್ಟೀಕರಣಗಳನ್ನು ನೀಡಬಹುದು. ಆದರೆ ಈ ವಿಚಾರವಾಗಿ ಅವರು ಸದನದ ದಾರಿ ತಪ್ಪಿಸುತ್ತಿದ್ದಾರೆ' ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries