ನವದೆಹಲಿ: ಗ್ರಾಮೀಣ ಭಾರತದ ಬಡ ಕುಟುಂಬಗಳಿಗೆ ಉದ್ಯೋಗದ ಖಚಿತ ಭರವಸೆಯನ್ನು ನೀಡುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಂ-ನರೇಗಾ) ಯೋಜನೆಯಲ್ಲಿ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡುತ್ತಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕಾರ್ಮಿಕರ ಕೂಲಿಯನ್ನು ಹಣದುಬ್ಬರ ಸೂಚ್ಯಂಕಕ್ಕೆ ಅನುಗುಣವಾಗಿ ಯಾಕೆ ನಿಗದಿ ಪಡಿಸಿಲ್ಲ ಎಂದೂ ಪ್ರಶ್ನಿಸಿದೆ. ಕನಿಷ್ಠ ಕೂಲಿಯನ್ನು ಏರಿಸುವುದಕ್ಕಾಗಿ ವ್ಯವಸ್ಥೆಯೊಂದನ್ನು ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
ನರೇಗಾ ಅಡಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡಲಾಗುತ್ತಿರುವ ಕೂಲಿಯಲ್ಲಿ ವ್ಯತ್ಯಾಸವಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಮಿತಿಯು, ಸಮಾನ ಕೂಲಿ ನೀಡಲು ಕ್ರಮ ಗೊಳ್ಳಬೇಕು ಎಂದು ಸಲಹೆ ನೀಡಿದೆ.
ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಾಕಾ ನೇತೃತ್ವದ ಸ್ಥಾಯಿ ಸಮಿತಿಯು ಗುರುವಾರ ತನ್ನ ವರದಿಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಿದೆ.
ಕೂಲಿಯನ್ನು ಹೆಚ್ಚಿಸುವ ವಿಚಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ನಿಲುವಿನಲ್ಲಿ ಗಮನಿಸುವಂತಹ ಬದಲಾವಣೆಗಳಾಗಿಲ್ಲ. ಈ ಕುರಿತಾಗಿ ಅದು 'ರೂಢಿಮಾದರಿಯ ಪ್ರತಿಕ್ರಿಯೆಗಳನ್ನೇ' ನೀಡುತ್ತಿದೆ ಎಂದು ವರದಿಯು ತೀಷ್ಣವಾಗಿ ಹೇಳಿದೆ.
'ಗ್ರಾಮೀಣ ಅಥವಾ ನಗರ ಪ್ರದೇಶವೇ ಆಗಿರಬಹುದು, ಹಣದುಬ್ಬರ ಏರಿಕೆ ಮತ್ತು ಜೀವನ ವೆಚ್ಚವು ಈಗ ಹಲವು ಪಟ್ಟುಗಳಷ್ಟು ಹೆಚ್ಚಾಗಿದೆ. ಈಗಲೂ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಯ್ದೆ ಅಡಿಯಲ್ಲಿ ನಿಗದಿಪಡಿಸಲಾಗಿರುವ ಕೂಲಿಯನ್ನು ಪರಿಗಣಿಸಿದರೆ, ಹಲವು ರಾಜ್ಯಗಳಲ್ಲಿ ಪ್ರತಿ ದಿನದ ಕೂಲಿ ಕಡಿಮೆ ಇದೆ' ಎಂದು ಸಮಿತಿಯು ಹೇಳಿದೆ.
'ನರೇಗಾ ಕೂಲಿಯನ್ನು ಚಾಲ್ತಿಯಲ್ಲಿರುವ ಹಣದುಬ್ಬರ ಸೂಚ್ಯಂಕಕ್ಕೆ ಸರಿ ಹೊಂದುವಂತೆ ಇನ್ನೂ ಯಾಕೆ ನಿಗದಿ ಪಡಿಸಿಲ್ಲ ಎನ್ನುವುದಕ್ಕೆ ಸ್ಪಷ್ಟವಾದ ವಿವರಣೆಯೇ ಸಿಗುತ್ತಿಲ್ಲ. ನರೇಗಾ ಕಾಯ್ದೆಯಡಿಯಲ್ಲಿ ಕನಿಷ್ಠ ಕೂಲಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯು ವಿವಿಧ ವಲಯಗಳಿಂದ ಕೇಳಿಬರುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯು ತಪ್ಪುಗ್ರಹಿಕೆಗೆ ಅವಕಾಶ ಇಲ್ಲದಂತೆ ತನ್ನ ನಿಲುವನ್ನು ಮರುಪರಿಶೀಲನೆಗೆ ಒಳಪಡಿಸಬೇಕು' ಎಂದು ಸಮಿತಿ ಹೇಳಿದೆ.
ಸಮಾನ ಕೂಲಿ ನೀಡಿ: ರಾಜ್ಯಗಳು ನೀಡುತ್ತಿರುವ ಕೂಲಿಯಲ್ಲಿ ಇರುವ ವ್ಯತ್ಯಾಸವು ಮತ್ತೊಂದು ಕಳವಳಕಾರಿ ಸಂಗತಿ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
'ಸಂವಿಧಾನದ 39ನೇ ವಿಧಿಯ (ಡಿ) ಪರಿಚ್ಛೇದವು ರಾಜ್ಯಗಳು ಪಾಲಿಸಬೇಕಾದ ಕೆಲವು ನೀತಿ ನಿಯಮಗಳ ಬಗ್ಗೆ ತಿಳಿಸುತ್ತದೆ. ಪುರುಷರು ಮತ್ತು ಮಹಿಳೆಯರು ಮಾಡುವ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಅದು ಹೇಳುತ್ತದೆ. ಈ ನಿರ್ದೇಶನದ ಪ್ರಕಾರ ನರೇಗಾ ಕಾಯ್ದೆಯ ಅಡಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಮಿಕರಿಗೆ ಬೇರೆ ಬೇರೆ ರೀತಿಯ ಕೂಲಿ ನೀಡುವಂತಿಲ್ಲ. ಸಂವಿಧಾನದ 39ನೇ ವಿಧಿಯ ಪ್ರಕಾರ ಮತ್ತು ಕೂಲಿಯಲ್ಲಿ ಸಮಾನತೆ ತರುವುದಕ್ಕಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯ ಫಲಾನುಭವಿಗಳಿಗೆ ಸಮಾನ ಕೂಲಿ ನೀಡಬೇಕು ಎಂದು ಸಮಿತಿ ಬಲವಾಗಿ ಪ್ರತಿಪಾದಿಸುತ್ತದೆ' ಎಂದು ವರದಿ ಹೇಳಿದೆ.
ಸದ್ಯ, ನರೇಗಾ ಅಡಿಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ನೀಡಲಾಗುತ್ತದೆ. ಇದನ್ನು 150 ದಿನಗಳಿಗೆ ಹೆಚ್ಚಿಸಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.