ಬದಿಯಡ್ಕ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಕಾಸರಗೋಡು ನಗರ ಹಾಗೂ ಶ್ರೀ ಗಣೇಶ ಮಂದಿರ ಶಾಖೆಯ ಪ್ರಥಮ ವಾರ್ಷಿಕೋತ್ಸವವು ಭಾನುವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಜರಗಿತು.
ಪ್ರಾತಃಕಾಲ ಸದಸ್ಯರಿಂದ ಭಜನೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪಬೆಳಗಿಸಿದರು. ನಿವೃತ್ತ ಅಧ್ಯಾಪಿಕೆ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ, ಕೊಡುಗೈದಾನಿ ಬಿ.ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಮಾತನಾಡಿ, ನಮ್ಮ ನಿತ್ಯಜೀವನದ ಬೆಳಗಿನ ಜಾವ ಅತೀ ಮಹತ್ವದ್ದಾಗಿದೆ. ಪ್ರಾತಃಕಾಲದಲ್ಲಿ ನಿದ್ದೆಯ ಜಾಡ್ಯದಿಂದ ಎದ್ದು ಸತ್ಸಂಗದ ಮೂಲಕ ಬೆಳಕನ್ನು ಕಾಣಲು ಈ ಶಿಬಿರದ ಪ್ರಯೋಜನವನ್ನು ಪಡೆಯುತ್ತಿರುವ ನೀವೆಲ್ಲ ಧನ್ಯರು. ಇದು ನಿರಂತರ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಪ್ರಶಿಕ್ಷಣ ವಿಭಾಗದ ಪ್ರಾಂತ ಸಂಚಾಲಕ ಲಕ್ಷ್ಮೀನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕಾರಯುತ ಜೀವನವನ್ನು ರೂಢಿಸಿಕೊಳ್ಳಲು ಇಂತಹ ಶಿಬಿರಗಳ ಮೂಲಕ ಸಾಧ್ಯ ಎಂದರು. ದಿನೇಶ್ ಸ್ವಾಗತಿಸಿ, ಲಲಿತ ವರದಿ ಮಂಡಿಸಿದರು. ವಿದ್ಯಾ ನಿರೂಪಿಸಿದರು. ಯೋಗೀಶ ವಂದಿಸಿದರು. ಕಾಸರಗೋಡು ಶಾಖಾ ವಿಸ್ತರಣಾ ಪ್ರಮುಖ ಕುಮಾರ ಸುಬ್ರಮಣ್ಯ ಹಾಗೂ ಶಾಖೆಯ ಪ್ರಮುಖರು, ಯೋಗ ಬಂಧುಗಳು ಉಪಸ್ಥಿತರಿದ್ದರು. ಪುಷ್ಪಾ ಹಾಗೂ ಗಿರೀಶ ತಮ್ಮ ಅನುಭವ ಹಂಚಿಕೊಂಡರು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಹೈಲೈಟ್ಸ್: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ಯೋಗ, ಸತ್ಸಂಗಗಳು ನಮ್ಮ ಬದುಕಿನ ಉನ್ನತಿಗೆ ಸಹಕಾರಿಯಾಗಿದೆ. ಭಗವಂತನ ಕೃಪೆಗೆ ಪಾತ್ರರಾಗುವಂತಹ ಉತ್ತಮ ಸಂಸ್ಕಾರಯುತ ಬದುಕು ನಮ್ಮದಾಗಬೇಕು. - ಬಿ.ವಸಂತ ಪೈ ಬದಿಯಡ್ಕ