ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಇನ್ನು ಜನಮಾನಸದಲ್ಲಿ ಜೀವಿಸುವರು. ಭಾರತದ ಆರ್ಥಿಕತೆಗೆ ಹೊಸ ದಿಶೆಯನ್ನು ತೋರಿಸಿ, ಜನಪರ ಯೋಜನೆಗಳ ಮೂಲಕ ಭಾರತೀಯರ ಹೃದಯವನ್ನು ಪ್ರವೇಶಿಸಿದ 'ಅರ್ಥಮಾಂತ್ರಿಕ'ನಿಗೆ ದೇಶವು ಶನಿವಾರ ಕಣ್ಣೀರಿನ ವಿದಾಯ ಹೇಳಿತು.
ಗುರುವಾರ ನಿಧನರಾದ ಸಿಂಗ್ ಅವರ ಅಂತ್ಯಕ್ರಿಯೆ ನವದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಸ್ತೋತ್ರಗಳ ಪಠಣದ ನಡುವೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಅಲ್ಲಿ ನೆರೆದಿದ್ದ ಅವರ ಅಭಿಮಾನಿಗಳು 'ಮನಮೋಹನ ಸಿಂಗ್ ಅಮರ್ ರಹೇ', 'ಜಬ್ ತಕ್ ಸೂರಜ್ ಚಾಂದ್ ರಹೇಗಾ, ತಬ್ ತಕ್ ತೇರಾ ನಾಮ್ ರಹೇಗಾ' ('ಮನಮೋಹನ ಸಿಂಗ್ ಅಮರರಾಗಿದ್ದಾರೆ', 'ಸೂರ್ಯ ಮತ್ತು ಚಂದ್ರ ಇರುವವರೆಗೂ ನಿಮ್ಮ ಹೆಸರು ಅಜರಾಮರ') ಎಂಬ ಘೋಷಣೆಗಳನ್ನು ಮೊಳಗಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಳಗೊಂಡಂತೆ ಹಲವು ಪ್ರಮುಖರ ಸಮ್ಮುಖದಲ್ಲಿ ಸಿಖ್ ಪುರೋಹಿತರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ಎಐಸಿಸಿ ಕಚೇರಿಯಲ್ಲಿ ಅಂತಿಮ ನಮನ: ಇದಕ್ಕೂ ಮುನ್ನ ಸಿಂಗ್ ಅವರ ಪಾರ್ಥಿಕ ಶರೀರಕ್ಕೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಖರ್ಗೆ, ಸೋನಿಯಾ ಮತ್ತು ರಾಹುಲ್ ಅವರು ಎಐಸಿಸಿ ಕಚೇರಿಯಲ್ಲಿ ಹಾಗೂ ಆ ಬಳಿಕ ನಿಗಮ್ ಬೋಧ್ ಘಾಟ್‌ನಲ್ಲೂ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಶ್ರದ್ಧಾಂಜಲಿ ಅರ್ಪಿಸಿದರು. ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಮತ್ತು ಪುತ್ರಿಯರಾದ ಉಪಿಂದರ್ ಸಿಂಗ್, ದಮನ್ ಸಿಂಗ್ ಹಾಗೂ ಅಮೃತ್ ಕೌರ್ ಮತ್ತು ಸಂಬಂಧಿಕರು ಹಾಜರಿದ್ದರು.
ಪಾರ್ಥಿವ ಶರೀರವನ್ನು ಎಐಸಿಸಿ ಕಚೇರಿಯಿಂದ ಮೆರವಣಿಗೆ ಮೂಲಕ ನಿಗಮ್ ಬೋಧ್ ಘಾಟ್‌ಗೆ ತರಲಾಯಿತು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೃತದೇಹ ಇರಿಸಿದ್ದ ಸೇನೆಯ ತೆರೆದ ವಾಹನದಲ್ಲಿ ಕುಳಿತಿದ್ದರು. ಆ ಬಳಿಕ ಮೃತದೇಹವನ್ನು ಚಿತೆಯಲ್ಲಿ ಇರಿಸುವಾಗಲೂ ಅವರು ಹೆಗಲುಕೊಟ್ಟರು.
ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್‌ಗ್ಯಾಲ್ ವಾಂಗ್ಚುಕ್ ಮತ್ತು ಮಾರಿಷಸ್ ವಿದೇಶಾಂಗ ಸಚಿವ ಧನಂಜಯ್ ರಾಮ್‌ಫೂಲ್ ಅವರು ನಿಗಮ್‌ಬೋಧ್ ಘಾಟ್‌ನಲ್ಲಿ ಅಂತಿಮ ನಮನ ಸಲ್ಲಿಸಿದರು.
2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿದ್ದ 92 ವರ್ಷದ ಸಿಂಗ್ ಅವರು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 26ರಂದು ರಾತ್ರಿ ನಿಧನರಾಗಿದ್ದರು.
ಎಐಸಿಸಿ ಕಚೇರಿಯಿಂದ ಅಂತಿಮ ಯಾತ್ರೆ
ಸಿಂಗ್ ಅವರ ಪಾರ್ಥಿವ ಶರೀರ ಹೊತ್ತ ವಾಹನ ಬೆಳಿಗ್ಗೆ 9ಕ್ಕೆ ಮೋತಿಲಾಲ್ ನೆಹರೂ ಮಾರ್ಗದ ಅವರ ನಿವಾಸದಿಂದ ಎಐಸಿಸಿ ಕಚೇರಿಗೆ ಹೊರಟಿತು.
ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಅಂತಿಮ ನಮನ ಸಲ್ಲಿಸಿದರು
ಎಐಸಿಸಿ ಕಚೇರಿಯಿಂದ ಮೃತದೇಹವನ್ನು ಮೆರವಣಿಗೆ ಮೂಲಕ ಬೆಳಿಗ್ಗೆ 11.30ಕ್ಕೆ ನಿಗಮ್ ಬೋಧ್ ಘಾಟ್‌ಗೆ ತರಲಾಯಿತು.
ಪಾರ್ಥಿವ ಶರೀರವನ್ನು ನಿಗಮ್ ಬೋಧ್ ಘಾಟ್‌ನಲ್ಲಿ ಎತ್ತರದ ವೇದಿಕೆಯಲ್ಲಿರಿಸಿ ಪಕ್ಷಭೇದ ಮರೆತು ಎಲ್ಲ ನಾಯಕರಿಗೆ ಪುಷ್ಪಗುಚ್ಛವನ್ನಿರಿಸಿ ಗೌರವ ಸಲ್ಲಿಸಲು ಅನುವು ಮಾಡಿಕೊಡಲಾಯಿತು.
ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮುನ್ನ ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿ '21 ಗನ್ ಸಲ್ಯೂಟ್' ನೀಡಿದರು.
ಸಿಖ್ ಪುರೋಹಿತರು ಮತ್ತು ಸಿಂಗ್ ಅವರ ಕುಟುಂಬದ ಸದಸ್ಯರು ಅಂತಿಮ ವಿಧಿ ವಿಧಾನ ನೆರವೇರಿಸುವ ಮೊದಲು ಗುರ್ಬಾನಿಯ ಸ್ತೋತ್ರಗಳನ್ನು ಪಠಿಸಿದರು.
ಮಾಜಿ ಪ್ರಧಾನಿಗೆ ಅವಮಾನ: ರಾಹುಲ್
ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆಗೆ ಸರ್ಕಾರವು ನಿಗಮ್ ಬೋಧ್ ಘಾಟ್‌ನಲ್ಲಿ ಸ್ಥಳ ನಿಗದಿ ಮಾಡಿದ್ದು ವಿವಾದ ಹುಟ್ಟುಹಾಕಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿವೆ. ನರೇಂದ್ರ ಮೋದಿ ಸರ್ಕಾರವು ಮಾಜಿ ಪ್ರಧಾನಿ ಮತ್ತು ಸಿಖ್ ಸಮುದಾಯವನ್ನು 'ಅವಮಾನಿಸಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. 'ಸಿಂಗ್ ಅವರನ್ನು ಎಂದಿಗೂ ಗೌರವಿಸದ ಕಾಂಗ್ರೆಸ್ ಇದೀಗ ಅವರ ಮರಣದ ನಂತರ ರಾಜಕೀಯದಲ್ಲಿ ತೊಡಗಿರುವುದು ದುಃಖಕರ' ಎಂದು ಬಿಜೆಪಿ ಹಿರಿಯ ನಾಯಕ ಸುಧಾಂಶು ತ್ರಿವೇದಿ ಟೀಕಿಸಿದ್ದಾರೆ. 'ಅಷ್ಟೊಂದು ವಿಶಾಲವಲ್ಲದ ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸರ್ಕಾರವು ಸಿಂಗ್ ಅವರಿಗೆ ಅವಮಾನ ಮಾಡಿದೆ. ಇದುವರೆಗೂ ಎಲ್ಲಾ ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯನ್ನು ಅಧಿಕೃತ ಸಮಾಧಿ ಸ್ಥಳಗಳಲ್ಲೇ ನಡೆಸಲಾಗಿತ್ತು. ಆ ಮೂಲಕ ಯಾವುದೇ ಅನನುಕೂಲ ಇಲ್ಲದೆ ಎಲ್ಲರಿಗೂ ಅಂತಿಮ ದರ್ಶನ ಮತ್ತು ಗೌರವ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ದೇಶದ ಈ ಮಹಾನ್ ಪುತ್ರ ಮತ್ತು ಅವರ ಹೆಮ್ಮೆಯ ಸಮುದಾಯಕ್ಕೆ ಸರ್ಕಾರ ಗೌರವ ತೋರಿಸಬೇಕಿತ್ತು' ಎಂದು ರಾಹುಲ್ ಅಂತ್ಯಕ್ರಿಯೆ ನೆರವೇರಿದ ಬೆನ್ನಲ್ಲೇ ಹೇಳಿದ್ದಾರೆ. ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗುವಂತಹ ಜಾಗದಲ್ಲೇ ಅಂತ್ಯಕ್ರಿಯೆಗೆ ಅವಕಾಶ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಪ್ರಧಾನಿಗೆ ಮನವಿ ಮಾಡಿದ್ದರು. ಆದರೆ ಆ ಬೇಡಿಕೆಗೆ ಒಪ್ಪದ ಸರ್ಕಾರ ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿತ್ತು. ಶುಕ್ರವಾರ ತಡರಾತ್ರಿ ಪ್ರಕಟಣೆ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ ಸ್ಮಾರಕ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡಲಾಗುವುದು ಎಂದು ಖರ್ಗೆ ಅವರಿಗೆ ತಿಳಿಸಿರುವುದಾಗಿ ಹೇಳಿದೆ.