ನವದೆಹಲಿ: ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
77 ಸಮುದಾಯಗಳನ್ನು ಒಬಿಸಿ (ಇತರೆ ಹಿಂದುಳಿದ ವರ್ಗ) ಎಂದು ವರ್ಗೀಕರಿಸಿದ್ದನ್ನು ಕಲ್ಕತ್ತ ಹೈಕೋರ್ಟ್ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ಪೀಠವು ಈ ಮಾತನ್ನು ಮೌಖಿಕವಾಗಿ ಹೇಳಿದೆ. ಈ 77 ಸಮುದಾಯಗಳಲ್ಲಿ ಹೆಚ್ಚಿನವು ಇಸ್ಲಾಂ ಧರ್ಮಕ್ಕೆ ಸೇರಿದವು.
ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, 'ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ನೀಡಿರಲಿಲ್ಲ. ಸಮುದಾಯಗಳ ಹಿಂದುಳಿದಿರುವಿಕೆಯನ್ನು ಕಂಡು ಮೀಸಲಾತಿ ನೀಡಲಾಗಿದೆ. ಹಿಂದುಳಿದಿರುವಿಕೆಯು ಸಮಾಜದ ಎಲ್ಲ ವರ್ಗಗಳಲ್ಲಿಯೂ ಇದೆ' ಎಂದರು.
ಪ್ರತಿವಾದಿಗಳ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪಿ.ಎಸ್. ಪಟ್ವಾಲಿಯಾ ಅವರು, ಸಿಬಲ್ ವಾದವನ್ನು ವಿರೋಧಿಸಿದರು. ಯಾವುದೇ ದತ್ತಾಂಶ ಇಲ್ಲದೆ, ಹಿಂದುಳಿದ ವರ್ಗಗಳ ಆಯೋಗವನ್ನು ಕಡೆಗಣಿಸಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಪಟ್ವಾಲಿಯಾ ಹೇಳಿದರು. ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಲಾಗಿದೆ.