ನವದೆಹಲಿ: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಪಿಒಎಸ್‌ಎಚ್ ಕಾಯ್ದೆಯಡಿ ಕಾರ್ಯವಿಧಾನವನ್ನು ಅನುಸರಿಸಲು ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಇತ್ಯರ್ಥಪಡಿಸಿತು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠವು, ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿರ್ಬಂಧ ಮತ್ತು ಪರಿಹಾರ) ಕಾಯ್ದೆಗೆ (2013ರ ಪಿಒಎಸ್‌ಎಚ್ ಕಾಯ್ದೆ) ಸಂಬಂಧಿಸಿದಂತೆ ಚುನಾವಣಾ ಆಯೋಗದ ಮೊರೆಹೋಗುವಂತೆ ಅರ್ಜಿದಾರರನ್ನು ಕೇಳಿಕೊಂಡಿತು.
ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದ ಎಂ.ಜಿ.ಯೋಗಮಾಯಾ ಪರ ಹಾಜರಿದ್ದ ಹಿರಿಯ ವಕೀಲರಾದ ಶೋಭಾ ಗುಪ್ತಾ ಅವರು, ದೇಶದಲ್ಲಿರುವ ಆರು ರಾಷ್ಟ್ರೀಯ ಪಕ್ಷಗಳು ಕೆಲಸದ ಸ್ಥಳದಲ್ಲಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಮತ್ತು 2013ರ ಕಾನೂನಿಗೆ ಅನುಗುಣವಾಗಿ ಕಾರ್ಯವಿಧಾನವನ್ನು ಹೊಂದಿಲ್ಲ ಎಂದು ಹೇಳಿದರು.
ಆರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಸಿಪಿಎಂ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಎಎಪಿ ಸೇರಿದಂತೆ ಒಟ್ಟು 10 ರಾಜಕೀಯ ಪಕ್ಷಗಳನ್ನು ಪಿಐಎಲ್‌ನಲ್ಲಿ ಹೆಸರಿಸಲಾಗಿದೆ.
ರಾಜಕೀಯ ಪಕ್ಷಗಳನ್ನು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ನೋಂದಾಯಿಸಲಾಗಿದೆ. ಈ ಕಾಯ್ದೆಯಡಿ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟ ಪ್ರಾಧಿಕಾರವು ಚುನಾವಣಾ ಆಯೋಗ ಆಗಿದೆ. ಆದರೆ ಅರ್ಜಿಯಲ್ಲಿ ಚುನಾವಣಾ ಆಯೋಗವನ್ನು ಕಕ್ಷಿದಾರರನ್ನಾಗಿ ಮಾಡಿಲ್ಲ ಎಂಬುದನ್ನು ಪೀಠವು ಗಮನಿಸಿತು.
ಅಂಗಡಿಗಳಲ್ಲಿ ಅಥವಾ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರು ಕೂಡ ಪಿಒಎಸ್‌ಎಚ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವರೇ ಎಂದು ನ್ಯಾಯಮೂರ್ತಿ ಸೂರ್ಯಕಾಂತ ಕೇಳಿದಾಗ, ಗುಪ್ತಾ ಅವರು 'ಎಲ್ಲಾ ಸಂತ್ರಸ್ತ ಮಹಿಳೆಯರು ಮತ್ತು ಕೆಲಸದ ಸ್ಥಳಗಳನ್ನು ಈ ಕಾಯ್ದೆ ಒಳಗೊಂಡಿದೆ' ಎಂದರು.
ರಾಜಕೀಯ ಪಕ್ಷಗಳು ಪಿಒಎಸ್‌ಎಚ್ ಕಾಯ್ದೆಗೆ ಒಳಪಡುವುದಿಲ್ಲ ಎಂದು ಕೇರಳ ಹೈಕೋರ್ಟ್ ಈ ಹಿಂದೆ ಹೇಳಿದ್ದು, ಅದರ ತೀರ್ಪನ್ನು ಪ್ರಶ್ನಿಸಲಾಗಿಲ್ಲ ಎಂಬುದನ್ನು ಪೀಠ ಗಮನಿಸಿತು. ಚುನಾವಣಾ ಆಯೋಗದ ಮೊರೆಹೋಗುವಂತೆ ಸೂಚಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು. ಸಮಸ್ಯೆಗೆ ಆಯೋಗದ ಬಳಿ ಸೂಕ್ತ ಪರಿಹಾರ ಸಿಗದಿದ್ದರೆ, ನ್ಯಾಯಾಲಯದ ಮೊರೆ ಹೋಗುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ನೀಡಿತು.