ನವದೆಹಲಿ: ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ 'ಇಂಡಿಯಾ' ಬಣದ ಪಕ್ಷಗಳ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ನರೇಂದ್ರ ಮೋದಿ ಮತ್ತು ಅದಾನಿ ಅವರ ವ್ಯಂಗ್ಯ ಚಿತ್ರಗಳಿದ್ದ ಬ್ಯಾಗ್‌ಗಳನ್ನು ಕುತ್ತಿಗೆಗೆ ನೇತು ಹಾಕೊಂಡಿದ್ದರು. ಚೀಲದ ಮತ್ತೊಂದು ಬದಿಯಲ್ಲಿ 'ಮೋದಿ ಅದಾನಿ ಭಾಯಿ ಭಾಯಿ' ಎಂದು ಬರೆಯಲಾಗಿತ್ತು.
ಅದಾನಿ ಪ್ರಕರಣಗಳ ಕುರಿತಂತೆ ಚರ್ಚೆಗೆ ಒತ್ತಾಯಿಸಿ ಸಂಸತ್ತಿನ ಉಭಯ ಸದನಗಳಲ್ಲೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣ ಪ್ರತಿಭಟನೆ ನಡೆಸುತ್ತಿದ್ದು, ಅದರ ಮುಂದುವರಿದ ಭಾಗ ಇದಾಗಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್, ಡಿಎಂಕೆ, ಜೆಎಂಎಂ, ಎಡಪಕ್ಷಗಳು ಸೇರಿದಂತೆ ಹಲವು ಸಂಸದರು ಧರಣಿಯಲ್ಲಿ ಭಾಗವಹಿಸಿದ್ದರು.
ಮೋದಿ ಮತ್ತು ಅದಾನಿ ವಿರುದ್ಧ ಘೋಷಣೆಗಳನ್ನು ಕೂಗಿದ ಸಂಸದರು, ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿದರು.
ಇದಕ್ಕೂ ಮುನ್ನ, ವಿವಿಧ ವಿಷಯಗಳ ಬಗ್ಗೆ ಪಕ್ಷದ ನಿಲುವು ಮತ್ತು ಸಂಸತ್ತಿನಲ್ಲಿ ಮುಂದಿನ ಹಾದಿಯನ್ನು ನಿರ್ಣಯಿಸಲು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದರ ಸಭೆ ನಡೆಸಿದ್ದರು.
ಸೋಮವಾರವೂ ಅದಾನಿ ವಿರುದ್ಧ ಸಂಸದರು ಪ್ರತಿಭಟನೆ ನಡೆಸಿದ್ದರು. ರಾಹುಲ್ ಗಾಂಧಿಯವರು ಮೋದಿ ಮತ್ತು ಅದಾನಿಯವರ ಮುಖವಾಡ ಧರಿಸಿದ್ದ ಸಂಸದರ ಜೊತೆ ಅಣಕು ಸಂದರ್ಶನ ನಡೆಸಿದ್ದರು.
ಸಂಸತ್ತಿನ ಮಕರ್ ದ್ವಾರದ ಬಳಿ ನಿಂತಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಸಂಸದರು ಮೋದಿ, ಅದಾನಿ ಏಕ್ ಹೈ ಎಂದು ಘೋಷಣೆ ಮೊಳಗಿಸಿದ್ದರು. ಈ ಸಂಬಂಧ ನಮಗೆ ನ್ಯಾಯ ಬೇಕಿದೆ ಎಂದು ಒತ್ತಾಯಿಸಿದ್ದರು.
ಅದಾನಿ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಅಮೆರಿಕ ನ್ಯಾಯಾಲಯ ಮಾಡಿರುವ ಆಪಾದನೆ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿ ತನಿಖೆಗೆ ಕಾಂಗ್ರೆಸ್ ಮತ್ತು ಇತರೆ ವಿಪಕ್ಷಗಳ ಸಂಸದರು ಒತ್ತಾಯಿಸಿದ್ದಾರೆ.
ಗೌತಮ್ ಅದಾನಿಯನ್ನು ಕೂಡಲೇ ಬಂಧಿಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.