ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಸಂಸದರು ಸಭೆ ನಡೆಸಿದರು. ಇದಾದ ಬಳಿಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದ ಸುಖ್ ಜಿಂದರ್ ಸಿಂಗ್ ರಾಂಧವ ನಡುವೆ ಸಮಯಪಾಲನೆ ಕುರಿತು ಹಾಸ್ಯಮಯ ಸಂಭಾಷಣೆ ನಡೆಯಿತು.
ವೈರಲ್ ಆಗಿರುವ ವಿಡಿಯೋದಲ್ಲಿ 65 ವರ್ಷದ ಗುರುದಾಸ್‌ಪುರ ಸಂಸದ ರಾಂಧವ ಅವರಿಗೆ ಸಭೆಗಳಿಗೆ ಸಮಯಕ್ಕೆ ಬರುವಂತೆ ಗಾಂಧಿ ಹೇಳುವುದನ್ನು ಕಾಣಬಹುದು. ಇದಕ್ಕೆ ರಾಂಧವ ಅವರು ಮಧ್ಯಪ್ರವೇಶಿ, ತಾನು ಸಮಯಕ್ಕೆ ಸರಿಯಾಗಿ ಬಂದಿದ್ದೇನೆ, ನೀವು ತಡವಾಗಿ ಬಂದಿದ್ದೀರಾ. ನಿಮಗಿಂತ ಮುಂಚೆ ನಾನು ಬಂದಿದ್ದೇನೆ ಎಂದು ಹೇಳಿದ್ದು ಇದಾದ ನಂತರ ಉಭಯ ನಾಯಕರು ನಗತೊಡಗಿದರು. ಈ ಹಾಸ್ಯಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ನಗುತ್ತಿದ್ದರು.
ಇದಕ್ಕೂ ಮುನ್ನ, ಗೌತಮ್ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಪದೇ ಪದೇ ಮುಂದೂಡಲ್ಪಟ್ಟ ಸಂಸತ್ತಿನಲ್ಲಿ ಪಕ್ಷದ ಕಾರ್ಯತಂತ್ರವನ್ನು ರೂಪಿಸಲು ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದರ ಸಭೆಯನ್ನು ನಡೆಸಿದರು. ಮತ್ತೊಂದೆಡೆ, ಎನ್‌ಡಿಎ ಸಂಸದರು ಕಾಂಗ್ರೆಸ್‌ನ ಉನ್ನತ ನಾಯಕರು ದೇಶವನ್ನು ಅಸ್ಥಿರಗೊಳಿಸಲು ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್‌ನೊಂದಿಗೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸಭೆಯ ನಂತರ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಅದಾನಿ ವಿಷಯದ ಬಗ್ಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಆದಾಗ್ಯೂ, ಈ ಬಾರಿ ಅವರು ಹೊಸ ಐಟಂ ಅನ್ನು ಹಿಡಿದುಕೊಂಡು ಬಂದಿದ್ದರು. 'ಕಪ್ಪು ಜೋಳಿಗೆ', ಅದರ ಮೇಲೆ ಪಿಎಂ ನರೇಂದ್ರ ಮೋದಿ ಮತ್ತು ಅದಾನಿ ಅವರ ಕಾರ್ಟೂನ್‌ಗಳನ್ನು ಮುದ್ರಿಸಲಾಗಿದೆ. ಇನ್ನೊಂದು ಕಡೆ 'ಮೋದಿ-ಅದಾನಿ ಭಾಯಿ ಭಾಯಿ' ಎಂದು ಬರೆಯಲಾಗಿತ್ತು.
ಲಂಚ ಮತ್ತು ವಂಚನೆ ಆರೋಪದ ಮೇಲೆ ಅದಾನಿ ವಿರುದ್ಧ ಯುಎಸ್ ದೋಷಾರೋಪಣೆ ಮಾಡಿದ ನಂತರ, ಅದಾನಿ ಗ್ರೂಪ್‌ನ ವ್ಯವಹಾರಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಕಾಂಗ್ರೆಸ್ ತನ್ನ ಬೇಡಿಕೆಯನ್ನು ತೀವ್ರಗೊಳಿಸಿದೆ.
ಸೋಮವಾರ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಗೌತಮ್ ಅದಾನಿ ಅವರ ಮುಖವಾಡಗಳನ್ನು ಧರಿಸಿರುವ ಇಬ್ಬರು ಕಾಂಗ್ರೆಸ್ ಸಂಸದರೊಂದಿಗೆ ಈ ವಿಷಯದ ಕುರಿತು ಅಣಕು 'ಸಂದರ್ಶನ' ನಡೆಸಿದರು. ಕಳೆದ ವಾರ ಕಾಂಗ್ರೆಸ್ ಸಂಸದರು ‘ಮೋದಿ ಅದಾನಿ ಒಂದೇ’ ಎಂಬ ಘೋಷಣೆಯ ಜಾಕೆಟ್ ಧರಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ್ದರು.