ಕಾಸರಗೋಡು: ಅಸ್ಸಾಂನಲ್ಲಿ 2018ರಲ್ಲಿ ನಡೆದಿದ್ದ ಭಯೋತ್ಪಾದನಾ ಕೃತ್ಯಗಳಲ್ಲಿ ಶಾಮೀಲಾದ ನಂತರ ಅಲ್ಲಿಂದ ಪರಾರಿಯಾಗಿ ಕಾಸರಗೋಡಿನ ವಿವಿಧೆಡೆ ವಾಸ್ತವ್ಯ ಹೂಡಿದ್ದ ಉಗ್ರ ಎಂ.ಬಿ ಮಹಮ್ಮದ್ ಶಾಬ್ ಶೇಖ್(32)ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಇಷಾಲ್ ಅಲ್‍ಖೈದಾದ ಸ್ಲೀಪರ್ ಸೆಲ್ ಸದಸ್ಯನಾಗಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿ ಅಸ್ಸಾಂ ಪೊಲೀಸರು ಈತನ ವಿರುದ್ಧ ಯುಎಪಿಎ ಅನ್ವಯ ಕೇಸು ದಾಖಲಿಸಕೊಳ್ಳುತ್ತಿದ್ದಂತೆ 2018ರಲ್ಲಿ ಈತ ತಲೆಮರೆಸಿಕೊಂಡಿದ್ದು, ವಾಸ್ತವ್ಯಕ್ಕೆ ಕಾಸರಗೋಡನ್ನು ಆಯ್ಕೆ ಮಾಡಿಕೋಮಡಿದ್ದನು. ಬಾಂಗ್ಲಾದೇಶದ ನಿವಾಸಿಯಾಘಿರುವ ಈತನ ಹಲವಾರು ಮಂದಿ ಸಹಚರರು ಈತನ ಜತೆಗೆ ಭಾರತಕ್ಕೆ ನುಸುಳಿದ್ದು, ಕಾರ್ಮಿಕರ ಸೋಗಿನಲ್ಲಿ ಹಲವೆಡೆ ಕೆಲಸ ನಿರ್ವಹಿಸುತ್ತಾರೆನ್ನಲಾಗಿದೆ. ಎಂ.ಬಿ ಮಹಮ್ಮದ್ ಶಾಬ್ ಶೇಖ್‍ನನ್ನು ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಈತ ಭಾರತದ ಹಿಂದೂ ಮುಖಂಡರ ಹತ್ಯೆಗೈದು ಈ ಮೂಲಕ ಕೋಮುದಳ್ಳುರಿ ಎದ್ದೇಳುವಂತೆ ಮಾಡುವ ಬಗ್ಗೆ ಸ್ಕೆಚ್ ಹಾಕಿರುವ ಅಂಶ ಬೆಳಕಿಗೆ ಬಂದಿದೆ. ಈತ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕ್ ಒಂದರಲ್ಲಿ ಖಾತೆ ತೆರೆದಿರುವುದನ್ನೂ ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.ಈತನಿಗೆ ನಕಲಿಯಾಗಿ ಆಧಾರ್‍ಕಾರ್ಡು, ಚುನಾವಣಾ ಗುರುತಿನ ಚೀಟಿ, ಪಾನ್‍ಕಾರ್ಡು ತಯಾರಿಸಿ ನೀಡಿದವರ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ.